ದೇಶ

ಪೌರತ್ವ ಕಾಯ್ದೆ ಜಾರಿ ನಿರ್ಧಾರದಿಂದ ಒಂದಿಂಚೂ ಹಿಂದೆ ಸರಿಯಲ್ಲ: ಅಮಿತ್ ಶಾ ಸ್ಪಷ್ಟನೆ

Lingaraj Badiger

ಜೋಧಪುರ: ಎಷ್ಟೇ ವಿರೋಧ ಇದ್ದರೂ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವ ನಿರ್ಧಾರದಿಂದ ಸರ್ಕಾರ ಒಂದಿಂಚೂ ಹಿಂದೆ ಸರಿಯುವುದಿಲ್ಲ, ಎಂದು ಕೇಂದ್ರ ಗೃಹ ಸಚಿವ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. 

ಇಂದು ರಾಜಸ್ಥಾನದ ಜೋಧಪುರದಲ್ಲಿ ಪೌರತ್ವ ಕಾಯ್ದೆ ಕುರಿತು ಜಾಗೃತಿ ಮೂಡಿಸುವ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್‌ ಮತ್ತು ಇತರ ಪಕ್ಷಗಳು ಕಾಯ್ದೆ ಬಗ್ಗೆ ದೇಶದಲ್ಲಿ ಅಪಪ್ರಚಾರ ಮಾಡುತ್ತಿವೆ ಎಂದು ಆರೋಪಿಸಿದರು. 

ಪೌರತ್ವ ಕಾಯ್ದೆ ದೇಶದ ಯಾವೊಬ್ಬ ನಾಗರಿಕರ ಪೌರತ್ವವನ್ನೂ ಕಸಿಯುವುದಿಲ್ಲ. ಬದಲಾಗಿ ಪೌರತ್ವ ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ 2015ಕ್ಕೂ ಮುನ್ನ ನೆರೆಯ ಮೂರು ರಾಷ್ಟ್ರಗಳಿಂದ ಮುಸ್ಲಿಮೇತರರು ಭಾರತಕ್ಕೆ ಬಂದಿದ್ದರೆ ಅವರಿಗೆ ಪೌರತ್ವ ನೀಡಲು ಈ ತಿದ್ದುಪಡಿ ಕಾಯ್ದೆ ಅನುಮತಿ ನೀಡುತ್ತದೆ. ಆದರೆ ಪ್ರತಿಪಕ್ಷಗಳು ಅನಗತ್ಯವಾಗಿ ಪೌರತ್ವ ಕಾಯ್ದೆಯನ್ನು ಟೀಕಿಸುತ್ತವೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ವೋಟ್ ಬ್ಯಾಂಕ್ ಗಾಗಿ ತಪ್ಪು ಮಾಹಿತಿ ಹರಡುತ್ತಿದೆ ಎಂದು ಅಮಿತ್ ಶಾ ಆರೋಪಿಸಿದರು.

SCROLL FOR NEXT