ದೇಶ

ಸಂಯಮ ಅಗತ್ಯ: ಅಮೆರಿಕಾ ವಿರುದ್ಧ ಪ್ರತೀಕಾರಕ್ಕೆ ಮುಂದಾದ ಇರಾನ್ ಗೆ ಭಾರತ ಸಲಹೆ

Lingaraj Badiger

ನವದೆಹಲಿ: ಅಮೆರಿಕಾ ಪಡೆಗಳು ವೈಮಾನಿಕ ದಾಳಿ ನಡೆಸಿ ಇರಾನ್ ನ ಅತ್ಯುನ್ನತ ಸೇನಾ ಕಮಾಂಡರ್ ಖಾಸಿಂ ಸೊಲೈಮಾನಿ ಅವರನ್ನು ಹತ್ಯೆ ಮಾಡಿದ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ, ಈ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸುರಕ್ಷತೆಯು ಅತ್ಯಂತ ಮಹತ್ವದ್ದಾಗಿದೆ ಎಂದು ಪ್ರತಿಪಾದಿಸಿದೆ.

ಭಾರತ ಸದಾ ಸಂಯಮವನ್ನು ಪ್ರದರ್ಶಿಸುತ್ತಾ ಬಂದಿದೆ ಮತ್ತು ಅದನ್ನು ಮುಂದುವರಿಸಿದೆ. ಇರಾನ್ ಸಹ ಸಂಯಮ ಕಾಯ್ದುಕೊಳ್ಳುವ ಅಗತ್ಯ ಇದೆ. ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳದಿರುವುದು ಅತ್ಯಗತ್ಯ ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಇರಾನ್‍ ನ ಮೇಜರ್ ಜನರಲ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಅಮೆರಿದಕ ವಿರುದ್ಧ ಅಲ್ಲಿನ ಉನ್ನತ ನಾಯಕರು ಪ್ರತಿಜ್ಞೆ ಮಾಡಿದ್ದಾರೆ.

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ)ಯ ಕುಡ್ಸ್ ಫೋರ್ಸ್‌ನ ಕಮಾಂಡರ್ ಮೇಜರ್ ಜನರಲ್ ಖಾಸಿಂ ಸೊಲೈಮಾನಿ ಅವರನ್ನು ಹತ್ಯೆ ಮಾಡಿದವರು ಇರಾನ್‌ನ ತೀವ್ರ ಪ್ರತಿಕ್ರಿಯೆಗಾಗಿ ಕಾಯಬೇಕಾಗುತ್ತದೆ ಎಂದು ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಶುಕ್ರವಾರ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.

ಇನ್ನು ಇರಾನ್‌ ವಿದೇಶಾಂಗ ಸಚಿವ ಜಾವೆದ್‌ ಝರೀಫ್‌ ಕೂಡ ಘಟನೆಯನ್ನು ಖಂಡಿಸಿದ್ದು, 'ಇದೊಂದು ಅಂತಾರಾಷ್ಟ್ರೀಯ ಭಯೋತ್ಪಾದನೆ' ಎಂದು ಕಿಡಿಕಾರಿದ್ದಾರೆ.

SCROLL FOR NEXT