ದೇಶ

ಜೆಎನ್ ಯುನಲ್ಲಿ ಹಿಂಸಾಚಾರ: ಮಾಸ್ಕ್ ಧರಿಸಿದ ದುಷ್ಕರ್ಮಿಗಳಿಂದ ವಿದ್ಯಾರ್ಥಿ ಸಂಘದ ಅಧ್ಯಕ್ಷೆ, ಉಪನ್ಯಾಸಕರ ಮೇಲೆ ಹಲ್ಲೆ

Lingaraj Badiger

ನವದೆಹಲಿ: ಸದಾ ಪ್ರತಿಭಟನೆ ಹಾಗೂ ಹಿಂಸಾಚಾರ ಘಟನೆಯಿಂದಲೇ ಸುದ್ದಿಯಾಗುವ ದೆಹಲಿಯ ಪ್ರತಿಷ್ಠಿತ ಜವಾಹರ್​ ಲಾಲ್​ ನೆಹರು ವಿಶ್ವವಿದ್ಯಾಲಯದಲ್ಲಿ ಭಾನುವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಮಾಸ್ಕ್ ಧರಿಸಿದ್ದ ದುಷ್ಕರ್ಮಿಗಳ ಗುಂಪೊಂದು ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಉಪನ್ಯಾಸಕರ ಮೇಲೆ ಹಲ್ಲೆ ನಡೆಸಿದ್ದಾರೆ.

ವರದಿಗಳ ಪ್ರಕಾರ, ಘಟನೆಯಲ್ಲಿ ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಷೆ ಘೋಷ್ ಹಾಗೂ ಪದಾಧಿಕಾರಿ ಸೇರಿ ಹಲವು ವಿದ್ಯಾರ್ಥಿಗಳ ಗಾಯಗೊಂಡಿದ್ದಾರೆ.

ಇಂದು ಸಂಜೆ 6.30ರ ಸುಮಾರಿಗೆ ಮುಖ ಮುಚ್ಚಿಕೊಂಡಿದ್ದ ಅಂದಾಜು 50 ಜನರ ಗುಂಪು ವಿವಿ ಆವರಣಕ್ಕೆ ನುಗ್ಗಿತು. ಈ ಗುಂಪು ಹಾಸ್ಟೆಲ್​ಗೆ ನುಗ್ಗಿ ಕಲ್ಲು ತೂರಾಟ ನಡೆಸಿತು ಎಂದು ಪ್ರತ್ಯಕ್ಷದರ್ಶಿ ಪ್ರೊಫೆಸರ್​ ಅತುಲ್​ ಸೂದ್​ ತಿಳಿಸಿದ್ದಾರೆ.

ಮುಖ ಮುಚ್ಚಿಕೊಂಡ ಗುಂಪು ನನ್ನ ಮೇಲೆ ಹಲ್ಲೆ ಮಾಡಿತು. ಮನ ಬಂದಂತೆ ಥಳಿಸಿದ್ದು, ರಕ್ತ ಸುರಿಯುತ್ತಿದೆ ಎಂದು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಷೆ ಘೋಷ್​ ತಿಳಿಸಿದ್ದಾರೆ.

ನಮ್ಮನ್ನು ರಕ್ಷಿಸಲು ಬಂದ ಉಪನ್ಯಾಸಕರ ಮೇಲೆಯೂ ಹಲ್ಲೆ ನಡೆದಿದೆ. ಇವರೆಲ್ಲ ಅಪರಿಚತ ಎಬಿವಿಪಿ ಗುಂಡಾಗಳು. ಅವರಲ್ಲಿ ಎಲ್ಲರೂ ವಿದ್ಯಾರ್ಥಿಗಳಲ್ಲ. ಅವರು ಪಶ್ಚಿಮ ದ್ವಾರದ ಹೊಟೇಲ್​ ​ಕಡೆಗೆ ನುಗ್ಗುತ್ತಿದ್ದಾರೆ. ಎಚ್ಚರದಿಂದಿರಿ, ಮಾನವ ಸರಪಳಿ ರಚಿಸಿ ನಿಮ್ಮನ್ನು ರಕ್ಷಿಸಿಕೊಳ್ಳಿ ಎಂದು ವಿದ್ಯಾರ್ಥಿ ಸಂಘಟನೆ ಟ್ವೀಟ್​ ಮಾಡಿದೆ.

ಎಬಿವಿಪಿಯ ಜೆಎನ್​ಯು ಘಟಕದ ಅಧ್ಯಕ್ಷ ದುರ್ಗೇಶ್​, ಪ್ರತಿಕ್ರಿಯಿಸಿ, ಎಡಪಂಥದ ಸುಮಾರು ನಾಲ್ಕರಿಂದ ಐನೂರು ಸದಸ್ಯರು ಪೆರಿಯಾರ್ ಹಾಸ್ಟೆಲ್ ಸುತ್ತಲೂ ಜಮಾಯಿಸಿದ್ದರು. ಹಾಸ್ಟೆಲ್ ಅನ್ನು ಧ್ವಂಸಗೊಳಿಸಿದರು. ಮತ್ತು ಅವರೇ ಎಬಿವಿಪಿ ಕಾರ್ಯಕರ್ತರನ್ನು ಒಳಗೆ ತಳ್ಳಲು ಪ್ರಯತ್ನಿಸಿದರು ಎಂದಿದ್ದಾರೆ.

ಅಲ್ಲದೆ ಎಬಿವಿಪಿಯ ಅಧ್ಯಕ್ಷೀಯ ಅಭ್ಯರ್ಥಿ ಮಂಗೀಶ್​ ಜಂಗಿದ್​ ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರ ಮೇಲೆಯೂ ಹಲ್ಲೆಯಾಗಿದ್ದು ಕೈ ಮುರಿದಿದೆ ಎಂದು ತಿಳಿಸಿದ್ದಾರೆ.

ಜೆಎನ್​ಯು ಗಲಭೆ ಮಾಹಿತಿ ತಿಳಿದು ಅಲ್ಲಿಗೆ 7 ಆಂಬುಲೆನ್ಸ್​ಗಳನ್ನು ಕಳುಹಿಸಲಾಗಿದೆ. ವಿವಿ ಸುತ್ತ ಅಲ್ಲದೆ ಹೆಚ್ಚವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ಪೊಲೀಸರು ತಕ್ಷಣ ಕ್ರಮ ಜರುಗಿಸಬೇಕು. ಅಲ್ಲಿನ ಹಿಂಸೆಯನ್ನು ತಡೆಯಬೇಕು. ವಿವಿ ಆವರಣದಲ್ಲೇ ವಿದ್ಯಾರ್ಥಿಗಳು ಸುರಕ್ಷಿತ ಅಲ್ಲವೆಂದಾದರೆ ದೇಶ ಉದ್ಧಾರ ಹೇಗೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್​ ಟ್ವೀಟ್​ನಲ್ಲಿ ಪ್ರಶ್ನಿಸಿದ್ದಾರೆ. 

SCROLL FOR NEXT