ದೇಶ

ದೆಹಲಿ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟ; ಫೆಬ್ರವರಿ 8 ರಂದು ಮತದಾನ, 11 ರಂದು ಫಲಿತಾಂಶ

Srinivasamurthy VN

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟ ಮಾಡಿದ್ದು, ಫೆಬ್ರವರಿ 8 ರಂದು ಮತದಾನ ನಡೆಯಲಿದೆ.

ದೆಹಲಿಯ ಆರನೇ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು, ಕೇಂದ್ರ ಮುಖ್ಯ ಚುನಾವಣಾಧಿಕಾರಿ ಸುನೀಲ್ ಅರೋರಾ ಅವರು ಇಂದು ವೇಳಾಪಟ್ಟಿ ಪ್ರಕಟಗೊಳಿಸಿದರು. ಇಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಫೆಬ್ರವರಿ 11ರಂದು ಒಂದೇ ಹಂತದಲ್ಲಿ ದೆಹಲಿ ವಿಧಾನಸಭೆಗೆ ಮತದಾನ ನಡೆಯಲಿದ್ದು, ಇಂದಿನಿಂದಲೇ ದೆಹಲಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಹೇಳಿದರು.

'ಹಾಲಿ ದೆಹಲಿ ವಿಧಾನಸಭೆಯ ಕಾಲಾವಧಿ ಫೆಬ್ರವರಿ 22ಕ್ಕೆ ಮುಕ್ತಾಯಗೊಳ್ಳುತ್ತದೆ. ಅಷ್ಟರೊಳಗೆ ಚುನಾವಣೆ ಪ್ರಕ್ರಿಯೆ ಮುಗಿದು ಹೊಸ ಸರ್ಕಾರ ರಚನೆಯಾಗಬೇಕಾಗುತ್ತದೆ. ಹೀಗಾಗಿ ಫೆಬ್ರವರಿ ರಂದು ಮತದಾನ ನಡೆಯಲಿದ್ದು, 11ರಂದು ಫಲಿತಾಂಶ ಪ್ರಕಟವಾಗಲಿದೆ. ದೆಹಲಿಯಲ್ಲಿ ಒಟ್ಟು 1,46,92,136 ಮತದಾರರಿದ್ದು, 13,750 ಮತಗಟ್ಟೆಗಳಲ್ಲಿ ಮತದಾನವಾಗಲಿದೆ. ಮಾಧ್ಯಮ ಮೇಲ್ವಿಚಾರಣೆ ವಿಭಾಗವನ್ನು ತೆರೆಯಲಾಗುವುದು. ದೆಹಲಿ ಚುನಾವಣಾ ಪ್ರಕ್ರಿಯೆಗೆ ಒಟ್ಟು 90 ಸಾವಿರ ಪೊಲೀಸರನ್ನು ನಿಯೋಜಿಸಲಾಗುವುದು. ಚುನಾವಣೆಯ ವೇಳಾಪಟ್ಟಿ ಅಂತಿಮಗೊಳಿಸುವ ಮುನ್ನ ಮೂವರು ಕಾರ್ಯದರ್ಶಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ಸುನೀಲ್ ಅರೋರಾ ಅವರು ಮಾಹಿತಿ ನೀಡಿದ್ಧಾರೆ.

ದೆಹಲಿಯ ವಿಧಾನಸಭೆ 70 ಸದಸ್ಯರ ಬಲ ಹೊಂದಿದ್ದು,  2015ರಲ್ಲಿ ನಡೆದ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ ಬರೋಬ್ಬರಿ 67 ಸ್ಥಾನಗಳನ್ನು ಗೆದ್ದು ಬಹುತೇಕ ಕ್ಲೀನ್ ಸ್ವೀಪ್ ಮಾಡಿತ್ತು. 

SCROLL FOR NEXT