ದೇಶ

’ನಾಳೆ, ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದ್ದಕ್ಕೂ ಎಬಿವಿಪಿ ಕಾರಣ ಎನ್ನುತ್ತಾರೆ’!

Srinivas Rao BV

ನವದೆಹಲಿ: ಜೆಎನ್ಯು ನಲ್ಲಿ ಜ.05 ರಂದು ರಾತ್ರಿ ನಡೆದ ಹಿಂಸಾಚಾರದ ಘಟನೆಯಲ್ಲಿ ಎಬಿವಿಪಿ ಕೈವಾಡ ಇದೆ ಎಂಬ ಆರೋಪಕ್ಕೆ ರಿಡಿಫ್ ಗೆ ನೀಡಿರುವ ಸಂದರ್ಶನದಲ್ಲಿ ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಧಿ ತ್ರಿಪಾಠಿ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ. 

ಘಟನೆ ಬಗ್ಗೆ ಮಾತನಾಡಿರುವ ಅವರು, ಜೆಎನ್ ಯು ವಿದ್ಯಾರ್ಥಿಗಳು ಓದಲು ಬಯಸುತ್ತಿದ್ದಾರೆ. ಆದರೆ ಈ ಎಡಪಂಥೀಯರು ಹಾಗೂ ನಕ್ಸಲರಿಗೆ ಜೆಎನ್ ಯು ವಿದ್ಯಾರ್ಥಿಗಳು ಓದುವುದು ಬೇಕಿಲ್ಲ. ಜೆಎನ್ ಯು ವನ್ನು ಮುಚ್ಚಿಸುವುದೇ ಅವರಿಗೆ ಬೇಕಿರುವುದು ಎಂದು ಹೇಳಿದ್ದಾರೆ.

ಕೊಳೆಯನ್ನು ಹರಡಿ ಅದನ್ನು ಎಬಿವಿಪಿ ಮೇಲೆ ಆರೋಪಿಸುವುದು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳಿಗೆ ಇರುವ ಹವ್ಯಾಸ. ಕ್ಯಾಂಪಸ್ ನಲ್ಲಿರುವ ವೈಫೈ ರೂಮ್ ಗಳನ್ನು ಮುಚ್ಚಿದ್ದರು. ವಿದ್ಯಾರ್ಥಿಗಳು ಪರೀಕ್ಷೆ ಎದುರಿಸದಂತೆ ಮಾಡುವುದಕ್ಕಾಗಿ ಮುಸುಕು ಧರಿಸಿ ಜೆಎನ್ ಯು ಅಧಿಕಾರಿಗಳನ್ನು ಅವರ ಕೆಲಸ ಮಾಡಲು ಬಿಡದೇ ಅಡ್ಡಿಪಡಿಸಿದ್ದು ಈ ಹಿಂದಿನ ವಿಡಿಯೋಗಳನ್ನು ನೋಡಿದರೆ ತಿಳಿಯುತ್ತದೆ ಎಂದು ನಿಧಿ ತ್ರಿಪಾಠಿ ಹೇಳಿದ್ದಾರೆ. 

ಎಬಿವಿಪಿಯನ್ನು ದೂಷಿಸುವುದರಿಂದ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಸಾಧಿಸುವುದು ಏನನ್ನು? ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಅವರಿಗೆ ಬೇಕಿರುವುದು ಎಬಿವಿಪಿಯನ್ನು ದೂಷಿಸುವುದಷ್ಟೇ. ಎಡರಂಗದ ವಿದ್ಯಾರ್ಥಿ ಸಂಘಟನೆಗಳಿಗೆ ಭಯ ಕಾಡುತ್ತಿದೆ. ಮುಂಬೈ ನಲ್ಲಿ 26/11 ರ ಭಯೋತ್ಪಾಕ ದಾಳಿ ನಡೆದಾಗ ಅದನ್ನು ಆರ್ ಎಸ್ಎಸ್ ಮಾಡಿತ್ತು ಎಂದು ಆರೋಪಿಸಿದವರೂ ಇವರೇ... ಆದರೆ ಇಂದು ಆ ದಾಳಿ ಯಾರಿಂದ ನಡೆದಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಅವರಿಗೆ ಎಬಿವಿಪಿ ಭಯ ಕಾಡುತ್ತಿದೆ. ನಾಳೆ ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದರೂ ಅದಕ್ಕೆ ಎಬಿವಿಪಿ ಕಾರಣ ಎಂದು ಹೇಳುತ್ತಾರೆ. ಅವರಿಗೆ ಗೊತ್ತಿರುವುದು ಎಬಿವಿಪಿಯನ್ನು ದೂಷಿಸುವುದಷ್ಟೇ ಎಂದಿದ್ದಾರೆ ನಿಧಿ ತ್ರಿಪಾಠಿ 

SCROLL FOR NEXT