ದೇಶ

ಕೇರಳ: ಅಪರೂಪದಲ್ಲಿ ಅಪರೂಪ, ಹಿಂದೂ ದಂಪತಿ ವಿವಾಹ ಮಹೋತ್ಸವಕ್ಕೆ ಸಜ್ಜಾದ ಮಸೀದಿ!

Nagaraja AB

ಅಲಾಫುಜಾ: ದೇಶದಲ್ಲಿ ಜಾತ್ಯತೀತ ಮನೋಭಾವ ದುರ್ಬಲವಾಗಿರುವ ಕಾಲದಲ್ಲಿ ಅಪರೂಪದಲ್ಲಿ ಅಪರೂಪ ಎಂಬಂತೆ ಕೇರಳದ  ಮಸೀದಿಯೊಂದರ ಆವರಣದಲ್ಲಿ  ಹಿಂದೂ ಯುವತಿಯ ವಿವಾಹವನ್ನು ಮಾಡಲು ಚೇರಾವಲ್ಲಿ ಮುಸ್ಲಿಂ ಜಾಮತ್ ಸದಸ್ಯರು ಸಿದ್ಧತೆ ನಡೆಸುತ್ತಿದ್ದಾರೆ.

ದಿವಂಗತ ಅಶೋಕನ್ ಅವರ ಪತ್ನಿ ಬಿಂದು, ತಮ್ಮ ಪುತ್ರಿಯ ಮದುವೆಗೆ ನೇರವಾಗುವಂತೆ ಕಳೆದೆರಡು ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದಾಗಿ ಚೇರವಲ್ಲಿ ಮುಸ್ಲಿಂ ಜಾಮತ್ ಕಮಿಟಿಯ ಕಾರ್ಯದರ್ಶಿ ನುಜ್ಮೀದೀನ್ ಅಲುಮ್ಮೊಟ್ಟಿ ಹೇಳಿದ್ದಾರೆ.

ಜಮಾತ್ ಕಮಿಟಿಯ ಮುಖಂಡರ ಒಪ್ಪಿಗೆ ಮೇರೆಗೆ  ಅಮೃಂಜಲಿಯ ಬಿಂದು ಪುತ್ರಿ ಅಂಜು ಹಾಗೂ ಕಪ್ಪಿಲ್ ಕಿಝಾಕುವಿನ ಶಶಿಧರನ್ ಹಾಗೂ ಮಿನಿ ಸಾಸಿ ಅವರ ಪುತ್ರ ಸರತ್ ಸಸಿ ಅವರ ನಡುವಿನ ವಿವಾಹ ಮಹೋತ್ಸವ ಜನವರಿ 19 ರಂದು ಮಸೀದಿಯಲ್ಲಿ ನಡೆಯಲಿದೆ.

ಮೂವರು ಮಕ್ಕಳೊಂದಿಗೆ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿರುವ ಬಿಂದು ಪತಿ ಎರಡು ವರ್ಷಗಳ ಹಿಂದೆ ತೀರಿಹೋಗಿದ್ದು,  ಆರ್ಥಿಕ ತೊಂದರೆ ಎದುರಿಸುತ್ತಿದ್ದು, ಅವರಿಗೆ ನೆರವು ನೀಡುವಂತೆ ಇತರ ಸದಸ್ಯರೊಂದಿಗೆ ಚರ್ಚಿಸಲಾಗಿದೆ. ಅವರ ಪರಿಸ್ಥಿತಿ ನನಗೆ ಚೆನ್ನಾಗಿ ಗೊತ್ತಿದೆ.ಹಿಂದೂ ಸಂಪ್ರದಾಯದ ಪ್ರಕಾರವೇ ಮದುವೆ ನಡೆಯಲಿದೆ. ಕಮಿಟಿಯಿಂದ 10 ಸಾವರಿನ್ ಚಿನ್ನ ಹಾಗೂ ಎರಡು ಲಕ್ಷ ರೂ. ಹಣ ನೀಡಲಾಗುವುದು. ವಿವಾಹದ ಸಂಪೂರ್ಣ ವೆಚ್ಚವನ್ನು ಕಮಿಟಿಯೇ ಭರಿಸಲಿದೆ ಎಂದು ಕೇರಳ ವ್ಯಾಪಾರಿ ವ್ಯವಸಾಯಿ ಇಕೊಪಾನ ಸಮಿತಿ ಅಧ್ಯಕ್ಷರೂ ಆಗಿರುವ ನುಜ್ಮುದೀನ್ ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದಿನಿಂದಲೂ ಬಿಂದು ನನಗೆ ಚೆನ್ನಾಗಿ ಗೊತ್ತಿದೆ. ಅವರ ಪತಿ ಸತ್ತಾಗ ಆರ್ಥಿಕ ತೊಂದರೆಯಿಂದಾಗಿ ಅಂತ್ಯಸಂಸ್ಕಾರಕ್ಕೂ ತೊಂದರೆ ಪಡುತ್ತಿದ್ದ ಬಗ್ಗೆ ದೈನಿಕವೊಂದರಲ್ಲಿ ವರದಿಯಾಗಿತ್ತು. ಮಾರನೇ ದಿನ ಅವರನ್ನು ಸಂಪರ್ಕಿಸಿ  ಅಂತ್ಯಸಂಸ್ಕಾರ ಮಾಡಲು ನೆರವಾದೆ. ಇದೀಗ ತಮ್ಮ ಪುತ್ರಿಯ ಮದುವೆಗೆ ಸಹಕರಿಸುವಂತೆ ಬಿಂದೂ ನಮ್ಮನ್ನು ಸಂಪರ್ಕಿಸಿದ್ದಾರೆ. ಆಕೆಯ ಮಗಳ ಮದುವೆಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಕಮಿಟಿ ಭರವಸೆ ನೀಡಿರುವುದಾಗಿ ನುಜ್ಮುದೀನ್  ತಿಳಿಸಿದ್ದಾರೆ. 

SCROLL FOR NEXT