ದೇಶ

ನಿರ್ಭಯಾ ರಕ್ಕಸರ ಶಿಕ್ಷೆ ಜಾರಿಗೆ ಮುಹೂರ್ತ ಫಿಕ್ಸ್: ಏಕಕಾಲಕ್ಕೆ 4 ಮಂದಿಗೆ ಗಲ್ಲು ಇದೇ ಮೊದಲು

Manjula VN

ನವದೆಹಲಿ: ನಿರ್ಭಯಾ ಗ್ಯಾಂಗ್ ರೇಪ್ ಎಂದೇ ಜನಮಾನಸದಲ್ಲಿ ಬೇರೂರಿರುವ ದೆಹಲಿಯ ಅರೆವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ಪೈಶಾಚಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಾಲ್ವರೂ ದೋಷಿಗಳ ಗಲ್ಲು ಶಿಕ್ಗೆ ದೆಹಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಮಂಗಲವಾರ ಡೆತ್ ವಾರಂಟ್ ಜಾರಿ ಮಾಡಿದೆ. 

ನಾಲ್ವರನ್ನೂ ಜನವರಿ 22ರ ಬೆಳಗಿನ 7 ಗಂಟೆಗೆ ದೆಹಲಿಯ ತಿಹಾರ್ ಜೈಲಿನಲ್ಲಿ ನೇಣುಗಂಬಕ್ಕೇರಿಸಲಾಗುತ್ತದೆ. ಇದರೊಂದಿಗೆ 2012ರ ಡಿಸೆಂಬರ್ 16ರಂದು ಈ ರಕ್ಕಸ ಕೃತ್ಯ ಎಸಗಿದವರ ಅಂತ್ಯಕ್ಕೆ ಘಟನೆ ನಡೆದ 2852 ದಿನಗಳ ಬಳಿಕ ಕೊನೆಗೂ ಮುಹೂರ್ತ ನಿಗದಿಯಾದಂತಾಗಿದೆ. 

ನಾಲ್ವರು ದೋಷಿಗಳನ್ನು ಏಕಕಾಲಕ್ಕೆ ಗಲ್ಲಿಗೆ ಹಾಕುತ್ತಿರುವುದು ದೇಶದಲ್ಲಿಯೇ ಇದೇ ಮೊದಲು ಎಂದು ಹೇಳಲಾಗುತ್ತಿದೆ. ಇದೂ ವರೆಗೆ ತಿಹಾರ್ ಜೈಲಿನಲ್ಲಿ ಒಂದು ನೇಣುಗಂಬ ಮಾತ್ರ ಇತ್ತು. ಆದರೆ, ಇತ್ತೀಚೆಗಷ್ಟೇ ಅಲ್ಲಿ ಹೊಸದಾಗಿ ಮೂರು ನೇಣುಗಂಬಗಳನ್ನು ನಿರ್ಮಿಸಲಾಗಿದೆ. 

ಇದು ಒಮ್ಮೆಗೆ ನಾಲ್ವರಿಗೂ ನೇಣು ಶಿಕ್ಷೆ ಹಾಕಲಾಗುತ್ತದೆ ಎಂಬ ವರದಿಗಳಿಗೆ ಪುಷ್ಟಿ ನೀಡುತ್ತಿದೆ. ಇದು ನಿಜವಾಗಿದ್ದೇ ಆದಲ್ಲಿ ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಾಲ್ವರಿಗೆ ಒಮ್ಮೆಗೆ ಗಲ್ಲು ಶಿಕ್ಷೆ ವಿಧಿಸಿದಂತಾಗುತ್ತದೆ. 

ರಾಜಧಾನಿ ದೆಹಲಿಯಲ್ಲಿ 2012 ಡಿ.16ರಂದು ರಾತ್ರಿ ಖಾಸಗಿ ಬಸ್ ನಲ್ಲಿ ಸ್ನೇಹಿತನ ಜೊತೆ ಅರೆವೈದ್ಯಕೀಯ ವಿದ್ಯಾರ್ಥಿ ಮನೆಗೆ ಮರಳುತ್ತಿದ್ದಳು. ಈಕೆಯ ಮೇಲೆ ಬಸ್ಸಿನ ಚಾಲಕ ಹಾಗೂ ಆತನ 5 ಸ್ನೇಹಿತರು ಬಸ್ಸಿನಲ್ಲಿಯೇ ಭೀಕರವಾಗಿ ಅತ್ಯಾಚಾರ ಎಗಸಿ, ಬಸ್ಸಿನಿಂದ ಹೊರಗೆ ಎಸೆದಿದ್ದರು. ಬಳಿಕ ಸಂತ್ರಸ್ತೆಯನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಿ, ನಂತರ ಸಿಂಗಾಪುರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಡಿ.29ರಂದು ಸಂತ್ರಸ್ತೆ ಆಸ್ಪತ್ರೆಯಲ್ಲಿಯೇ ಅಸುನೀಗಿದ್ದಳು. 

SCROLL FOR NEXT