ದೇಶ

ಕಾಶ್ಮೀರಕ್ಕೆ 16 ದೇಶಗಳ ರಾಜತಾಂತ್ರಿಕರ ನಿಯೋಗ ಭೇಟಿ, ಯೂರೋಪಿಯನ್, ಆಸಿಸ್ ರಾಯಭಾರಿಗಳ ಗೈರು

Srinivasamurthy VN

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮ, ಪ್ರಯತ್ನಗಳ ಬಗ್ಗೆ ಮನವರಿಕೆ ಮಾಡುವ ಸಲುವಾಗಿ 15 ಮಂದಿ ವಿದೇಶಿ ರಾಜತಾಂತ್ರಿಕರ ನಿಯೋಗ ಇಂದು ಕಣಿವೆಗೆ ಭೇಟಿ ನೀಡಲಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕಳೆದ ಆಗಸ್ಟ್ನಲ್ಲಿ ಕೇಂದ್ರ ಸರ್ಕಾರ ವಾಪಾಸು ಪಡೆದು ಈ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿದ ಹಿನ್ನೆಲೆಯಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡುವ ಇಂಗಿತವನ್ನು ವಿದೇಶಿ ರಾಜತಾಂತ್ರಿಕರು ವ್ಯಕ್ತಪಡಿಸಿದ್ದು, ಎರಡು ದಿನಗಳ ಪ್ರವಾಸ ಆಯೋಜಿಸಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ. ಮಧ್ಯಪ್ರಾಚ್ಯ, ಆಫ್ರಿಕಾ ಹಾಗೂ ಲ್ಯಾಟಿನ್ ಅಮೆರಿಕ ಹೀಗೆ ವಿಭಿನ್ನ ಪ್ರದೇಶಗಳಿಂದ ರಾಜತಾಂತ್ರಿಕರನ್ನು ಆಯ್ಕೆ ಮಾಡಲಾಗಿದ್ದು, ಇದು ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಮೊದಲ ನಿಯೋಗವಾಗಿದೆ.

ಪಂಚಾಯತ್ ಸದಸ್ಯರು ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳ ಮುಖ್ಯಸ್ಥರನ್ನು ರಾಜತಾಂತ್ರಿಕ ನಿಯೋಗದ ಸದಸ್ಯರು ಭೇಟಿ ಮಾಡಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಗುರುವಾರ ನಿಯೋಗದ ಜತೆ ಮಾತುಕತೆಗೆ ಸಜ್ಜಾಗುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾಗಿ ಹಲವು ಮಂದಿ ಜನಪ್ರತಿನಿಧಿಗಳು ವಿವರಿಸಿದ್ದಾರೆ.

ಯೂರೋಪಿಯನ್, ಆಸಿಸ್ ನಿಯೋಗ ಗೈರು
ಯೂರೋಪ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಕೆಲ ದೇಶಗಳ ರಾಜತಾಂತ್ರಿಕರು ಭೇಟಿಯನ್ನು ಖಚಿತಪಡಿಸಿಲ್ಲವಾದ್ದರಿಂದ ಕೊನೆಕ್ಷಣದಲ್ಲಿ ಈ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ ಎನ್ನಲಾಗಿದೆ. ಯೂರೋಪಿಯನ್ ಒಕ್ಕೂಟದ ರಾಜತಾಂತ್ರಿಕರು ಈ ನಿಯೋಗದಲ್ಲಿ ಇರುವುದಿಲ್ಲ. ಮತ್ತೊಂದು ಪ್ರತ್ಯೇಕ ದಿನ ಅವರು ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಇಯು ರಾಜತಾಂತ್ರಿಕರು ಈ ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜತೆ ಮಾತುಕತೆ ನಡೆಸಿದ್ದು, ಸದ್ಯದಲ್ಲೇ ದಿನ ನಿಗದಿಯಾಗಲಿದೆ ಎಂದು ತಿಳಿದುಬಂದಿದೆ.

SCROLL FOR NEXT