ದೇಶ

ಜಮ್ಮು-ಕಾಶ್ಮೀರ: ಇಂಟರ್ನೆಟ್ ಸೇವೆ ಪಡೆಯುವುದು ಮೂಲಭೂತ ಹಕ್ಕು, 7 ದಿನಗಳಲ್ಲಿ ಅದರ ಪರಾಮರ್ಶೆ ನಡೆಸಿ: 'ಸುಪ್ರೀಂ' ಆದೇಶ

Sumana Upadhyaya

ನವದೆಹಲಿ: ಇಂಟರ್ನೆಟ್ ಸೇವೆ ಪಡೆಯುವುದು ಸಂವಿಧಾನದ ಪರಿಚ್ಛೇದ 19ರಡಿ ನಾಗರಿಕರ ಮೂಲಭೂತ ಹಕ್ಕು, ಸಮಂಜಸವಾದ ನಿರ್ದಿಷ್ಟ ಕಾರಣಗಳಿಗೆ ನಿರ್ದಿಷ್ಟ ಸಮಯದವರೆಗೆ ಮಾತ್ರ ಇಂಟರ್ನೆಟ್ ಸೇವೆಗಳಿಗೆ ನಿರ್ಬಂಧ ಹೇರಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶ ನೀಡಿದೆ.


ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದ ಕೇಂದ್ರ ಸರ್ಕಾರ ನಂತರ ಇಂಟರ್ನೆಟ್ ಸೇವೆಗಳಿಗೆ ಹೇರಿದ್ದ ನಿರ್ಬಂಧವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎನ್ ವಿ ರಮಣ, ಆರ್ ಸುಭಾಷ್ ರೆಡ್ಡಿ ಮತ್ತು ಬಿ ಆರ್ ಗವೈ ಅವರನ್ನೊಳಗೊಂಡ ನ್ಯಾಯಪೀಠ ಇಂದು ಮಹತ್ವದ ಆದೇಶವನ್ನು ನೀಡಿದೆ.  ಜಮ್ಮು-ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆಗಳನ್ನು ರದ್ದುಪಡಿಸಿ ನಂತರದ ಸ್ಥಿತಿಗತಿಯನ್ನು ಇನ್ನು 7 ದಿನಗಳೊಳಗೆ ಪರಾಮರ್ಶೆ ನಡೆಸುವಂತೆ ಜಮ್ಮು-ಕಾಶ್ಮೀರ ಆಡಳಿತಕ್ಕೆ ಹೇಳಿದೆ.

ಜಮ್ಮು-ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆಗಳಿಗೆ ಮತ್ತು ಇತರ ವಿಷಯಗಳಿಗೆ ಹೇರಲಾಗಿರುವ ನಿರ್ಬಂಧ ಕುರಿತು ಪರಾಮರ್ಶೆ ನಡೆಸಬೇಕು. ಇಂಟರ್ನೆಟ್ ಸೇವೆಗಳಿಗೆ ನಿರ್ದಿಷ್ಟ ಕಾರಣಗಳಿಗೆ ಅಲ್ಪಾವಧಿಯವರೆಗೆ ಮಾತ್ರ ನಿರ್ಬಂಧ ಹೇರಬಹುದಾಗಿದ್ದು ಅದು ನ್ಯಾಯಾಂಗ ಪರಾಮರ್ಶೆಗೆ ಒಳಪಡುತ್ತದೆ. ಎಲ್ಲಾ ನಿರ್ಬಂಧ ಆದೇಶಗಳು ಸಾರ್ವಜನಿಕವಾಗಿ ಸಿಗುವಂತಿರಬೇಕು ಮತ್ತು ಅದನ್ನು ಪ್ರಶ್ನಿಸಿ ಕಾನೂನು ನ್ಯಾಯಾಲಯದಲ್ಲಿ ಹೋರಾಟ ನಡೆಸಬಹುದಾಗಿದೆ ಎಂದು ಸಹ ಹೇಳಿದೆ.

ಇಂಟರ್ನೆಟ್ ಸೇವೆ ಸ್ಥಗಿತ ನಿರ್ಧಾರದ ಹಿಂದಿನ ರಾಜಕೀಯ ವಿಚಾರಗಳ ಬಗ್ಗೆ ನ್ಯಾಯಾಲಯ ತನಿಖೆ ಮಾಡಲು ಹೋಗುವುದಿಲ್ಲ, ಪ್ರಜಾಪ್ರಭುತ್ವದಲ್ಲಿ ಜನರ ತೀರ್ಮಾನಕ್ಕೆ ಬಿಡುತ್ತೇವೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.


ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಸಂವಿಧಾನ ವಿಧಿ 370ನ್ನು ರದ್ದುಪಡಿಸಿದ ನಂತರ ಕಣಿವೆ ಪ್ರದೇಶದಲ್ಲಿ ಇಂಟರ್ನೆಟ್ ಸೇವೆಗಳಿಗೆ ಹೇರಲಾಗಿದ್ದ ನಿರ್ಬಂಧಗಳನ್ನು ಪ್ರಶ್ನಿಸಿ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್, ಕಾಶ್ಮೀರ ಟೈಮ್ಸ್ ಕಾರ್ಯಕಾರಿ ಸಂಪಾದಕರು ಕಳೆದ ವರ್ಷ ನವೆಂಬರ್ 27ರಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿದ್ದರು. 


ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಇಂಟರ್ನೆಟ್ ಸೇವೆಗಳಿಗೆ ನಿರ್ಬಂಧ ಹೇರಿದ್ದರಿಂದ ಕಣಿವೆ ನಾಡಿನಲ್ಲಿ ಯಾವುದೇ ಸಾವು-ನೋವು ಸಂಭವಿಸಲಿಲ್ಲ ಎಂದು ಕಳೆದ ನವೆಂಬರ್ 21ರಂದು ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು. 

SCROLL FOR NEXT