ದೇಶ

ಮೋದಿ- ಮಮತಾ ಭೇಟಿ: ಬಂಗಾಳದಲ್ಲಿ ಸಿಎಎ, ಎನ್ ಆರ್ ಸಿಗೆ ವಿರೋಧ, ಕಾಯ್ದೆ ವಾಪಾಸ್ ಪಡೆಯಿರಿ- ದೀದಿ ಆಗ್ರಹ

Nagaraja AB

ಕೊಲ್ಕತ್ತಾ: ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿರುವ  ಪೌರತ್ವ ತಿದ್ದುಪಡಿ ಕಾಯ್ದೆ  ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ( ಎನ್ ಪಿಆರ್ ) ನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿರುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ

ಈ ವಿಚಾರದ ಬಗ್ಗೆ ಚರ್ಚಿಸಲು ದೆಹಲಿಗೆ ಬರುವಂತೆ ಮೋದಿ ಹೇಳಿದ್ದಾರೆ ಎಂದು ರಾಜಭವನದಲ್ಲಿಂದು ಅವರನ್ನು ಭೇಟಿಯಾದ ಬಳಿಕ ಮಮತಾ ಬ್ಯಾನರ್ಜಿ ಸುದ್ದಿಗಾರರಿಗೆ ತಿಳಿಸಿದರು.

ಪ್ರಧಾನಿ ಜೊತೆಗಿನ ಭೇಟಿ ಔಪಚಾರಿಕ ಭೇಟಿ ಎಂದ ಮಮತಾ ಬ್ಯಾನರ್ಜಿ, ಕೇಂದ್ರದಿಂದ ರಾಜ್ಯಕ್ಕೆ ಬಾಕಿ ಬರಬೇಕಾದ ಅನುದಾನ ಕುರಿತಂತೆಯೂ ಚರ್ಚೆ ನಡೆಸಲಾಗಿದೆ. ಕೇಂದ್ರದಿಂದ ಇನ್ನೂ 28 ಸಾವಿರ ಕೋಟಿ ರೂ. ಬಾಕಿ ಬರಬೇಕಾಗಿದೆ ಎಂದು ಪ್ರಧಾನಿಗೆ ತಿಳಿಸಿದ್ದಾಗಿ ಹೇಳಿದರು. 

ಸಿಎಎ, ಎನ್ ಆರ್ ಸಿ, ಹಾಗೂ ಎನ್ ಪಿಆರ್ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಪ್ರಧಾನಿ ಜೊತೆಗೆ ಮಾತುಕತೆ ನಡೆಸಿದ್ದೇನೆ. ಈ ವಿಚಾರದ ಬಗ್ಗೆ ಮರು ಚಿಂತಿಸಬೇಕು ಹಾಗೂ ಸಿಎಎನ್ನು ವಾಪಾಸ್ ಪಡೆಯುವಂತೆ ತಿಳಿಸಿರುವುದಾಗಿ ಒತ್ತಾಯಿಸಿದ್ದೇನೆ ಎಂದರು.

ಇದಕ್ಕೂ ಮುನ್ನ ಪ್ರತಿಭಟನೆ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಎನ್ ಎಸ್ ಸಿ ಬೋಸ್ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ರಾಜ್ಯಪಾಲ ಜಗದೀಪ್ ದಾನ್ಕರ್, ಮೇಯರ್ ಫಿರ್ಹಾದ್ ಹಕೀಂ, ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಮತ್ತಿತರರು ಬರಮಾಡಿಕೊಂಡರು. ಮಮತಾ ಬ್ಯಾನರ್ಜಿ ವಿಮಾನ ನಿಲ್ದಾಣದಲ್ಲಿ ಹಾಜರಿ ಇರಲಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಬಳಿಕ ಮಮತಾ ಬ್ಯಾನರ್ಜಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

SCROLL FOR NEXT