ದೇಶ

ಸಿಎಎ ತಾರತಮ್ಯ ಹಾಗೂ ವಿಭಜಕ ಕಾನೂನು- ಸೋನಿಯಾ ಗಾಂಧಿ

Nagaraja AB

ನವದೆಹಲಿ: ನೂತನ ಪೌರತ್ವ ತಿದ್ದುಪಡಿ ಕಾಯ್ದೆ ತಾರತಮ್ಯ ಹಾಗೂ ವಿಭಜಕ ಕಾನೂನು ಎಂದು ಕಾಂಗ್ರೆಸ್   ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಜನರನ್ನು ಧರ್ಮದ ಆಧಾರದ ಮೇಲೆ ವಿಭಜಿಸುವ ಕೆಟ್ಟ ಉದ್ದೇಶದ ಕಾನೂನು ಇದಾಗಿದೆ. ಎನ್ ಪಿಆರ್ ವೇಷ ಧರಿಸಿದ ಎನ್ ಆರ್ ಸಿ ಎಂದು ಅವರು ಪ್ರತಿಪಾದಿಸಿದರು.

ಕಾಂಗ್ರೆಸ್ ಕಾರ್ಯಾಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ನೂತನ ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನದಿಂದ ಮುಂದೆ ಆಗಬಹುದಾದ ಗಂಭೀರ ಪರಿಣಾಮಗಳನ್ನು ಅರಿತುಕೊಂಡು ಸಹಸ್ರಾರು ಯುವ ಜನರು, ಮಹಿಳೆಯರು ವಿಶೇಷವಾಗಿ ವಿದ್ಯಾರ್ಥಿಗಳು ಪೊಲೀಸರೊಂದಿಗೆ ಸಂಘರ್ಷ ನಡೆಸುವ ಮೂಲಕ ಬೀದಿಗಿಳಿದು ಹೋರಾಟ ನಡೆಸಿದ್ದಾರೆ ಎಂದರು.

ಸಿಎಎ ವಿರುದ್ಧದ ಘಟನೆಗಳಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಆಯೋಗವನ್ನು ರಚಿಸಿ ಸಮಗ್ರ ತನಿಖೆ ನಡೆಸಬೇಕು, ನೊಂದವರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಪ್ರತಿದಿನ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದು, ವಿದ್ಯಾರ್ಥಿಗಳ ಪ್ರತಿಭಟನೆ ಆಂದೋಲನವಾಗುತ್ತಿದ್ದರಿಂದ ಅದನ್ನು ಸರ್ಕಾರ ಹತ್ತಿಕ್ಕಿದ್ದು ಸ್ಪಷ್ಟವಾಗಿದೆ.  ದೆಹಲಿ, ಉತ್ತರ ಪ್ರದೇಶ ಪೊಲೀಸ್ ರಾಜ್ಯಗಳಾಗಿವೆ ಎಂದರು.

ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಸಹಜವಾಗಿದೆ ಎಂದು ಸರ್ಕಾರ ಹೇಳುತ್ತಿದ್ದರೂ ಅಲ್ಲಿ ಜನರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವುದನ್ನು ಮುಂದುವರೆಸಿರುವುದು ಆಕ್ರೋಶ ಹಾಗೂ ಕಳವಳಕಾರಿ ಸಂಗತಿಯಾಗಿದೆ  ಎಂದು ಸೋನಿಯಾ ಗಾಂಧಿ ಹೇಳಿದರು. 

ಮಾಜಿ ಪ್ರಧಾನಿ ಡಾ.ಮನ್ ಮೋಹನ್ ಸಿಂಗ್, ಕಾಂಗ್ರೆಸ್ ಮುಖಂಡರಾದ ಪಿ. ಚಿದಂಬರಂ, ಆನಂದ್ ಶರ್ಮಾ, ಎ. ಕೆ. ಆಂಟೋನಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತಿತರರು ಈ ಸಭೆಯಲ್ಲಿ ಭಾಗವಹಿಸಿದ್ದರು. 

SCROLL FOR NEXT