ದೇಶ

ಕೊಲ್ಕತ್ತಾ: ಸಿಎಎ ವಿರುದ್ಧ ಪ್ರತಿಭಟನೆ ಮುಂದುವರೆದಿರುವಂತೆ ಮೋದಿ ಭೇಟಿಯಾದ ಮಮತಾ

Nagaraja AB

ಕೊಲ್ಕತ್ತಾ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಕೊಲ್ಕತ್ತಾ ನಗರದಾದ್ಯಂತ ಪ್ರತಿಭಟನೆ ಮುಂದುವರೆದಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜಭವನದಲ್ಲಿಂದು ಭೇಟಿಯಾದರು.ಈ ಭೇಟಿಯ ಅಜೆಂಡಾ ಮಾತ್ರ ತಿಳಿದುಬಂದಿಲ್ಲ.

ಎರಡು ದಿನಗಳ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಕೊಲ್ಕತ್ತಾಕ್ಕೆ ಆಗಮಿಸಿದ್ದು, ಕಿರು ಅವಧಿಯಲ್ಲಿ ಉಭಯ ನಾಯಕರು ಭೇಟಿಯಾಗಿದ್ದು, ರಾಜಕೀಯ ಮಹತ್ವದ ಸಭೆ ನಡೆಸಿದ್ದಾರೆ

ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲ ಜಗದೀಪ್ ದಾನ್ ಖಾರ್, ಸಚಿವ ಫಿರ್ಹಾದ್ ಹಕೀಂ, ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಮತ್ತಿತರ ಹಿರಿಯ ನಾಯಕರು ಪ್ರಧಾನಿಯನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾಕ್ಕೆ ಬಿಜೆಪಿ ಒತ್ತಡ ಹೇರುತ್ತಿದ್ದರೆ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅದನ್ನು ವಿರೋಧಿಸುತ್ತಿದ್ದಾರೆ. ಈ ಮಧ್ಯೆಯೇ ಪ್ರಧಾನಿ ಮೋದಿ ಹಾಗೂ ಮಮತಾ ಸಭೆ ನಡೆಸಿದ್ದಾರೆ. 

ಇಂದು ಮತ್ತು ನಾಳೆ ಕೊಲ್ಕತ್ತಾದಲ್ಲಿರುವ ಪ್ರಧಾನಿ ಮೋದಿ, ನಾಳೆ ಕೊಲ್ಕತ್ತಾ ಬಂದರು ಟ್ರಸ್ ನ 150ನೇ ವರ್ಷಾಚರಣೆ  ಮತ್ತಿತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ ನಡುವೆಯೇ ನೂರಾರು ಸಂಖ್ಯೆಯ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು. ಪ್ರಧಾನಿ ಮೋದಿ ಭೇಟಿ ವಿರೋಧಿಸಿ ರಾಜ್ಯದ ಹಲವೆಡೆ ಪ್ರತಿಭಟನೆಗಳು ಕೂಡಾ ನಡೆಯುತ್ತಿವೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಾಪಾಸ್ ಪಡೆಯುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ. ನರೇಂದ್ರ ಮೋದಿ ನಗರಕ್ಕೆ ಆಗಮಿಸುವುದು ಬೇಡ, ಬಂದರೆ ಈ ರಾಜ್ಯದ ವಾತವಾರಣ ಹದಗೆಡಲಿದೆ ಎಂದು ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆ.

ರಾಮಕೃಷ್ಣ ಮಿಶನ್ ನ ಕೇಂದ್ರ ಕಚೇರಿ ಬೆಲೂರ್ ಮಠದಲ್ಲಿ ಇಂದು ರಾತ್ರಿ ಪ್ರಧಾನಿ ಮೋದಿ ವಾಸ್ತವ್ಯ ಹೂಡಲಿದ್ದಾರೆ. ಅವರ ಭೇಟಿ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಆಡಳಿತದಿಂದ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. 

SCROLL FOR NEXT