ದೇಶ

ಪೊಲೀಸ್ ಅಧಿಕಾರಿಗೆ ಉಗ್ರರ ನಂಟು: ಕಾಶ್ಮೀರ ಡಿಎಸ್ ರಾಷ್ಟ್ರಪತಿಗಳ ಪದಕ ಹಿಂಪಡೆಯುವ ಸಾಧ್ಯತೆ! 

Srinivas Rao BV

ಆಘಾತಕಾರಿ ಬೆಳವಣಿಗೆಯಲ್ಲಿ ಕಾಶ್ಮೀರದ ಡಿಎಸ್ ಪಿ ದೇವೇಂದರ್ ಸಿಂಗ್ ಗೂ ಭಯೋತ್ಪಾದಕರಿಗೂ ನಂಟಿರುವ ಮಾಹಿತಿ ಬಹಿರಂಗವಾಗಿದೆ. 

ಡಿಎಸ್ ಪಿ ದೇವೆಂದರ್ ಸಿಂಗ್ ರಾಷ್ಟ್ರಪತಿಗಳಿಂದ ಪೊಲೀಸ್ ಪದಕ ಪಡೆದಿರುವ ಅಧಿಕಾರಿಯಾಗಿದ್ದು, ಉಗ್ರರ ಜೊತೆ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ. ಈ ನಡುವೆ ಆತನಿಗೆ ನೀಡಲಾಗಿರುವ ಪದಕವನ್ನೂ ಹಿಂಪಡೆಯುವ ಸಾಧ್ಯತೆ ಇದೆ. 

ಜಮ್ಮು-ಕಾಶ್ಮೀರದ ಪೊಲೀಸರು ಈ ಅಧಿಕಾರಿಯ ಬಂಧನದ ಬಗ್ಗೆ ಈಗಾಗಲೇ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿದ್ದಾರೆ. ಹಾಗೂ ದಕ್ಷಿಣ ಕಾಶ್ಮೀರದಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ಜೊತೆ ಪೊಲೀಸ್ ಅಧಿಕಾರಿ ಸಿಕ್ಕಿಬಿದ್ದಿದ್ದು ಈ ಕಾರ್ಯಾಚರಣೆ ವೇಳೆಯೇ ಎಂಬುದು ಗಮನಾರ್ಹ ಸಂಗತಿ. 

ಉಗ್ರರೊಂದಿಗೆ ಸಿಕ್ಕಿಬಿದ್ದಿದ್ದ ದೇವೇಂದರ್ ಸಿಂಗ್ ಹೆಸರು 2001 ರ ಸಂಸತ್ ಭವನದ ಮೇಲಿನ ಉಗ್ರದಾಳಿಯ ಸಂದರ್ಭದಲ್ಲೂ ಕೇಳಿಬಂದಿತ್ತು. ಈ ದಾಳಿಯ ಪ್ರಮುಖ ಅಪರಾಧಿ ಅಫ್ಜಲ್ ಗುರು ಕೋರ್ಟ್ ನಲ್ಲಿ ದೇವೇಂದರ್ ಸಿಂಗ್ ವಿರುದ್ಧ ಗಂಭೀರ ಆರೋಪ ಮಾಡಿದ್ದ. ಆದರೆ ಗುಪ್ತಚರ ಇಲಾಖೆ ಹಾಗೂ ರಾಜ್ಯ ಪೊಲೀಸರು ಅಫ್ಜಲ್ ಗುರುವಿನದ್ದು ಕಪೋಲಕಲ್ಪಿತ ಹೇಳಿಕೆ ಎಂದು ಆರೋಪಗಳನ್ನು ನಿರಾಕರಿಸಿದ್ದರು. 

ತನ್ನ ನಿರ್ದೇಶನದ ಪ್ರಕಾರ ಕಾರ್ಯಾಚರಣೆ ನಡೆಸದೇ ಹೋದರೆ ನನ್ನ ಕುಟುಂಬ ಸದಸ್ಯರನ್ನು ಹತ್ಯೆ ಮಾಡುವುದಾಗಿ ದೇವೇಂದರ್ ಸಿಂಗ್ ಬೆದರಿಸಿದ್ದ, ಸಂಸತ್ ಮೇಲೆ ಭಯೋತ್ಪಾದಕ ದಾಳಿ ನಡೆಸಲು ನಿರ್ದೇಶಿಸಿದ್ದೇ ಈ ದೇವೇಂದರ್ ಸಿಂಗ್ ಎಂಬ ಮಾಹಿತಿ ಬಿಚ್ಚಿಟ್ಟಿದ್ದ ಅಫ್ಜಲ್ ಗುರು. ಅಷ್ಟೇ ಅಲ್ಲದೇ ದೆಹಲಿಯಲ್ಲಿ ಬಾಡಿಗೆಗೆ ಫ್ಲ್ಯಾಟ್ ತೆಗೆದುಕೊಂಡು, ಭಯೋತ್ಪಾದಕರ ಬಳಕೆಗೆ ಸೆಕೆಂಡ್ ಹ್ಯಾಂಡ್ ಅಂಬಾಸಿಡರ್ ಕಾರನ್ನೂ ಖರೀದಿಸುವಂತೆ ದೇವೇಂದರ್ ಸಿಂಗ್ ಒತ್ತಡ ಹೇರಿದ್ದರು ಎಂದು ಅಫ್ಜಲ್ ಗುರು ಆರೋಪಿಸಿದ್ದ. 

ಈಗ ಪೊಲೀಸ್ ಅಧಿಕಾರಿ ಉಗ್ರರೊಂದಿಗೇ ಸಿಕ್ಕಿಬಿದ್ದಿದ್ದು ಗುಪ್ತಚರ ಇಲಾಖೆ, ರಾ ತನಿಖಾ ಸಂಸ್ಥೆಗಳು ಪೊಲೀಸ್ ಅಧಿಕಾರಿಯನ್ನು ವಿಚಾರಣೆಗೊಳಪಡಿಸಲಿವೆ.

SCROLL FOR NEXT