ದೇಶ

ಎನ್ಐಎ ಕಾಯ್ದೆ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಛತ್ತೀಸ್ಗಢ ಸರ್ಕಾರ

Manjula VN

ನವೆದಹಲಿ: ಪೌರತ್ವ ಕಾಯ್ದೆ ವಿರುದ್ಧ ಕೆಲ ದಿನಗಳ ಹಿಂದಷ್ಟೇ ಕೇರಳ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಛತ್ತೀಸ್ಗಢ ಸರ್ಕಾರ (ರಾಷ್ಟ್ರೀಯ ತನಿಖಾ ದಳ) ಎನ್ಐಎ ಕಾಯ್ದೆ 2008 ಕಾಯ್ದೆ ವಿರುದ್ಧ ಬುಧವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. 

ಸಂವಿಧಾನದ 131ನೇ ವಿಧಿ ಅನ್ವಯ ಛತ್ತೀಸ್ಗಢ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಮೊಕದ್ದಮೆ ಹೂಡಿದ್ದು, ಈ ಕಾಯ್ದೆಯು ಕೇಂದ್ರ ಸರ್ಕಾರದ ವಿರುದ್ಧದ ವಿಷಯಗಳಲ್ಲಿ ರಾಜ್ಯವು ನೇರವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಅವಕಾಶವನ್ನು ನೀಡುತ್ತದೆ. 

ಎನ್ಐಎ ಕಾಯ್ದೆಯು ತನ್ನ ಅಧಿಕಾರಕ್ಕೆ ಮೀರಿದ ಹಾಗೂ ಸಂಸತ್ತಿನ ಶಾಸಕಾಂಗ ಸಾಮರ್ಥ್ಯಕ್ಕೆ ಮೀರಿದ ಶಕ್ತಿಯನ್ನು ನೀಡುತ್ತದೆ. ಕಾಯ್ದೆ ಮೂಲಕ ಎನ್ಐಎ ರಾಜ್ಯ ಪೊಲೀಸರ ಮೂಲಕ ತನಿಖೆಯ ಅಧಿಕಾರವನ್ನು ಕಸಿದುಕೊಳ್ಳುತ್ತದೆ. ಅಷ್ಟೇ ಅಲ್ಲದೆ, ಕೇಂದ್ರಕ್ಕೆ ಅನಿಯಂತ್ರಿತ ಅಧಿಕಾರವನ್ನು ನೀಡುತ್ತದೆ. ಪ್ರಸ್ತುತ ಜಾರಿಗೆ ತಂದಿರುವ ಕಾಯ್ದೆಯ ನಿಬಂಧನೆಯು ರಾಜ್ಯ ಸರ್ಕಾರದಿಂದ ಕೇಂದ್ರವು ಯಾವುದೇ ರೂಪದಲ್ಲಿ ಸಮನ್ವಯ ಮತ್ತು ಪೂರ್ವಭಾವಿ ಸ್ಥಿತಿಗೆ ಅವಕಾಶ ನೀಡುವುದಿಲ್ಲ. ಇದರಿಂದ ಕಾಯ್ದೆಯು ರಾಜ್ಯ ಸಾರ್ವಭೌಮತ್ವದ ಕಲ್ಪನೆಗೆ ವಿರುದ್ಧವಾಗಿರುವುದು ಸ್ಪಷ್ಟವಾಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಿದೆ. 

ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾದ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸುವುವುದಕ್ಕೆ ಎನ್ಐಎ ಕಾಯ್ದೆ ಅವಕಾಶ ನೀಡಲಿದೆ. ಈ ವರೆಗಿನ ಕಾಯ್ದೆಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾದ ಸಂಘಟನೆಗಲನ್ನು ಭಯೋತ್ಪಾದನಾ ಸಂಘಟನೆ ಎಂದು ಘೋಷಿಸುವ ಅವಕಾಶವಿತ್ತು. ಆದರೆ, ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸುವ ಅವಕಾಶ ಕಾಯ್ದೆಯಲ್ಲಿರಲಿಲ್ಲ. ಇದೀಗ ತಿದ್ದುಪಡಿಯಾಗಿರುವ ಎನ್ಐಎ ಕಾಯ್ದೆಯು ನಿರ್ದಿಷ್ಟ ಅಪರಾಧಗಳ ಪಟ್ಟಿಯಲ್ಲಿರುವ ಅಪರಾಧಗಳ ತನಿಖೆ ಹಾಗೂ ವಿಚಾರಣೆಗೆ ಈ ಕಾಯ್ದೆ ಅವಕಾಶ ನೀಡಲಿದೆ. ಜೊತೆಗೆ ಈ ಅಪರಾಧಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಕೂಡ ಅವಕಾಶ ನೀಡಲಿದೆ. 

SCROLL FOR NEXT