ದೇಶ

ಗಗನಯಾನ 2022: ಆಯ್ಕೆಯಾಗಿರುವ 4 ಗಗನಯಾತ್ರಿಗಳಿಗೆ ರಷ್ಯಾದಲ್ಲಿ ತರಬೇತಿ

Manjula VN

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಮಾನವಸಹಿತ ಗಗನಯಾನ 2022ರಲ್ಲಿ ನಡೆಯಲಿದ್ದು, ಗಗಯಾನಕ್ಕೆ ಆಯ್ಕೆಗೊಂಡಿರುವ ನಾಲ್ವರು ಗಗನಯಾತ್ರಿಗಳಿಗೆ ರಷ್ಯಾದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. 

ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಚಿವ ಜಿತೇಂದ್ರ್ ಸಿಂಗ್ ಅವರು, ಗಗನಯಾತ್ರಿಗಳಿಗೆ ರಷ್ಯಾದಲ್ಲಿ ತರಬೇತಿ ನೀಡಲಾಗುತ್ತಿದ್ದು, ಜನವರಿ ಮೂರನೇ ವಾರದಲ್ಲಿ ತರಬೇತಿ ಆರಂಭಗೊಳ್ಳಲಿದೆ ಎಂದು ಹೇಳಿದ್ದಾರೆ. 

ರಷ್ಯಾದಲ್ಲಿ 11 ತಿಂಗಳುಗಳ ಕಾಲ ತರಬೇತಿ ನೀಡಲಾಗುತ್ತಿದ್ದು, ತರಬೇತಿ ಬಳಿಕ ಈ ಗಗನಯಾತ್ರಿಗಳಿಗೆ ಭಾರತದಲ್ಲಿಯೂ ನಿರ್ದಿಷ್ಟ ತರಬೇತಿಗಳನ್ನು ನೀಡಲಾಗುತ್ತದೆ. ಬಳಿಕ ಇಸ್ರೋ ವಿನ್ಯಾಸಗೊಳಿಸಿರುವ ಸಿಬ್ಬಂದಿ ಹಾಗೂ ಸೇನಾ ಘಟಕದಲ್ಲಿಯೂ ತರಬೇತಿ ನೀಡಲಾಗುತ್ತದೆ. ತಮ್ಮ ದೇಹದ ಮೇಲಿನ ನಿಯಂತ್ರಣದೊಂದಿಗೆ ಯಾತ್ರಿಗಳು ನೌಕೆಯನ್ನು ತಾವೇ ನಿರ್ವಹಿಸಿಕೊಳ್ಳುವುದು, ಅಲ್ಲಿರುವ ಕಂಪ್ಯೂಟರ್ ವ್ಯವಸ್ಥೆ, ಚಲನೆಯ ನಿಯಂತ್ರಣ, ನೌಕೆಯೊಳಗಿನ ತಾಪಮಾನ ಹಾಗೂ ಆಕ್ಸಿಜನ್ ನಿಯಂತ್ರಣ, ಭೂಮಿಯನ್ನು ಸುತ್ತು ಹಾಕುವ ಹಾಗೂ ಗಮನಿಸುವ ಕೆಲಸ ಇವೆಲ್ಲವನ್ನೂ ಗಗನಯಾತ್ರಿಗಳು ತಿಳಿದುಕೊಳ್ಳಲಿದ್ದಾರೆ. 

ರೂ.10,000 ಕೋಟಿಗಳ ಈ ಮಹತ್ವಾಕಾಂಕ್ಷಿ ಯೋಜನೆಯು 2022ರಲ್ಲಿ ಪ್ರಾರಂಭಗೊಳ್ಳುವ ನಿರೀಕ್ಷೆಗಳಿವೆ. ಇದೇ ವೇಳೆ ಭಾರತ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನೂ ಆಚರಿಸಲಿದೆ. 

SCROLL FOR NEXT