ದೇಶ

ಇಂದಿನಿಂದ ಫಾಸ್ಟ್ ಟ್ಯಾಗ್ ಕಡ್ಡಾಯ:1 ತಿಂಗಳು ಸಡಿಲಿಕೆ, ಇಲ್ಲದಿದ್ದರೆ ಏನಾಗುತ್ತದೆ? 

Sumana Upadhyaya

ನವದೆಹಲಿ: ದೇಶಾದ್ಯಂತ ಗುರುವಾರದಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಫಾಸ್ಟ್‌ ಟ್ಯಾಗ್‌ ಕಡ್ಡಾಯ ಎಂದು ಘೋಷಿಸಲಾಗಿದ್ದರೂ, ಇನ್ನೂ 1 ತಿಂಗಳ ಕಾಲ ನಿಯಮಾವಳಿಗಳನ್ನು ಸಡಿಲಗೊಳಿಸಲಾಗಿದೆ.


ನೂರಕ್ಕೆ ನೂರರಷ್ಟು ಕಡ್ಡಾಯ ಎಂದಿದ್ದನ್ನು ಶೇ.75ಕ್ಕೆ ಇಳಿಸಲಾಗಿದೆ. ಅಂದರೆ ಟೋಲ್‌ ಪ್ಲಾಜಾಗಳ ಶೇ.75 ಲೇನ್‌ಗಳಲ್ಲಿ ಫಾಸ್ಟ್‌ ಟ್ಯಾಗ್‌ ಕಡ್ಡಾಯವಾಗಿದೆ. ಉಳಿದ ಶೇ.25ರಷ್ಟು ಲೇನ್‌ಗಳನ್ನು ಹೈಬ್ರಿಡ್‌ ಲೇನ್‌ಗಳೆಂದು ಪರಿಗಣಿಸಬಹುದು. ಹಾಗೂ ಈ ಲೇನ್‌ಗಳಲ್ಲಿ ಫಾಸ್ಟ್‌ ಟ್ಯಾಗ್‌ ಇಲ್ಲದೆಯೂ, ಇತರ ನಗದು ಸೇರಿದಂತೆ ಇತರ ಸಾಮಾನ್ಯ ಪದ್ಧತಿಯಲ್ಲೂ ಶುಲ್ಕ ಪಾವತಿಸಬಹುದು. ಆದರೆ ಈ ತಾತ್ಕಾಲಿಕ ವ್ಯವಸ್ಥೆ 1 ತಿಂಗಳು ಲಭ್ಯ ಎಂದು ಸಾರಿಗೆ ಇಲಾಖೆ ತಿಳಿಸಿದೆ.


ಹೊಸ ವ್ಯವಸ್ಥೆಯ ಆರಂಭಿಕ ಅಡಚಣೆಗಳನ್ನು ಬಗೆಹರಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

ಫಾಸ್ಟ್ ಟ್ಯಾಗ್  ಇಲ್ಲದಿದ್ದರೆ ಏನಾಗುತ್ತದೆ: ನಿಮ್ಮ ವಾಹನಗಳಲ್ಲಿ ಇಂದಿನಿಂದ ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳದಿದ್ದರೆ ಭಾರತದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ನೀವು ದುಪ್ಪಟ್ಟು ಶುಲ್ಕ ಪಾವತಿಸಿ ಸಂಚರಿಸಬೇಕಾಗುತ್ತದೆ. 

ಎಲ್ಲಾ ವಾಹನಗಳಿಗೆ ಅದು ಖಾಸಗಿಯಾಗಿರಲಿ ಅಥವಾ ವಾಣಿಜ್ಯ ಬಳಕೆಗೆ ಆಗಿರಲಿ ಫಾಸ್ಟ್ ಟ್ಯಾಗ್ ಅಳವಡಿಸುವುದು ಕಡ್ಡಾಯವಾಗಿದೆ. ಆರಂಭದಲ್ಲಿ ಡಿಸೆಂಬರ್ 15ರೊಳಗೆ ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳಬೇಕೆಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ನಂತರ ಅದನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿತ್ತು. ಕೊನೆಗೆ ಅಂತಿಮವಾಗಿ ಜನವರಿ 15ಕ್ಕೆ ಮುಂದೂಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು.


ಫಾಸ್ಟ್ ಟ್ಯಾಗ್ ಹೇಗೆ ಅನುಕೂಲ: ವಾಹನದ ವಿಂಡ್ ಸ್ಕ್ರೀನ್ ಮೇಲೆ ಫಾಸ್ಟ್ ಟ್ಯಾಗ್ ಅಂಟಿಸಲಾಗುತ್ತದೆ. ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡರೆ ಟೋಲ್ ಪ್ಲಾಜಾ ಬಳಿ ವಾಹನಗಳನ್ನು ನಿಲ್ಲಿಸಬೇಕೆಂದಿಲ್ಲ. ಸ್ವಯಂಚಾಲಿತವಾಗಿ ಶುಲ್ಕ ಫಾಸ್ಟ್ ಟ್ಯಾಗ್ ಮೂಲಕ ಕಡಿತವಾಗುತ್ತದೆ. ಫಾಸ್ಟ್ ಟ್ಯಾಗ್ ನ್ನು ವಾಹನ ಮಾಲಿಕರ ಬ್ಯಾಂಕು ಖಾತೆಗೆ ಅಥವಾ ಪ್ರಿಪೇಡ್ ವಾಲೆಟ್ ಗೆ ಸಂಪರ್ಕಿಸಲಾಗುತ್ತದೆ. ಫಾಸ್ಟ್ ಟ್ಯಾಗ್ ಆರ್ ಎಫ್ ಐಡಿ ತಂತ್ರಜ್ಞಾನ ಮೂಲಕ ಕಾರ್ಯನಿರ್ವಹಿಸುತ್ತದೆ. 


ಫಾಸ್ಟ್ ಟ್ಯಾಗ್ ನ್ನು ಪ್ರಸ್ತುತ 23 ಬ್ಯಾಂಕುಗಳಿಗೆ ಜೋಡಿಸಲಾಗಿದೆ. ಫಾಸ್ಟ್ ಟ್ಯಾಗ್ ನ್ನು ಪೇಟಿಎಂ, ಹೆಚ್ ಡಿಎಫ್ ಸಿ ಬ್ಯಾಂಕು, ಐಸಿಐಸಿಐ ಬ್ಯಾಂಕು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೊಟಾಕ್ ಮಹೀಂದ್ರಾ ಇತ್ಯಾದಿಗಳ ಮೂಲಕ ಖರೀದಿಸಬಹುದು. ಅಮೆಜಾನ್ ನಂತಹ ಇ-ಕಾಮರ್ಸ್ ಮೂಲಕ ಸಹ ಸಿಗುತ್ತದೆ.

SCROLL FOR NEXT