ದೇಶ

ಕೇರಳ ಆಯ್ತು, ಇದೀಗ ಪಂಜಾಬ್ ಸರ್ಕಾರ ಕೂಡ ವಿಧಾನಸಭೆಯಲ್ಲಿ ಸಿಎಎ ವಿರುದ್ಧ ನಿರ್ಣಯ ಮಂಡನೆ 

Sumana Upadhyaya

ಚಂಡೀಗಢ: ಕೇಂದ್ರ ಸರ್ಕಾರ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯನ್ನು ಜಾರಿಗೆ ತರುವುದಿಲ್ಲ ಎಂದು ಕೇರಳ ರಾಜ್ಯ ಸರ್ಕಾರ ಪಟ್ಟು ಹಿಡಿದ ನಂತರ ಇದೀಗ ಪಂಜಾಬ್ ರಾಜ್ಯ ಕೂಡ ಅದೇ ಹಾದಿ ತುಳಿದಿದೆ.


ಇಲ್ಲಿನ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಇಂದು ವಿಧಾನಸಭೆಯಲ್ಲಿ ನಿರ್ಣಯ ಹೊರಡಿಸಿ ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತೆಗೆದುಹಾಕಬೇಕೆಂದು ಒತ್ತಾಯಿಸಲಾಯಿತು.


ಪಂಜಾಬ್ ರಾಜ್ಯ ವಿಧಾನಸಭೆಯಲ್ಲಿ ನಡೆಯುತ್ತಿರುವ ಎರಡು ದಿನಗಳ ವಿಶೇಷ ಅಧಿವೇಶನದಲ್ಲಿ ಸಚಿವ ಬ್ರಹ್ಮ್ ಮೊಹಿಂದ್ರಾ ಸಿಎಎ ವಿರುದ್ಧ ನಿರ್ಣಯ ಹೊರಡಿಸಿದರು.


ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ ದೇಶಾದ್ಯಂತ ಜನರಲ್ಲಿ ಆಕ್ರೋಶ ಮತ್ತು ಸಾಮಾಜಿಕ ಅಸ್ಥಿರತೆಗೆ ಕಾರಣವಾಗಿದ್ದು ನಮ್ಮ ರಾಜ್ಯದಲ್ಲಿ ಕೂಡ ಸಾಕಷ್ಟು ವಿರೋಧ ಕಂಡುಬಂದಿದೆ. ಇದರಿಂದ ಸಮಾಜದ ಶಾಂತಿ, ಸುವ್ಯವಸ್ಥೆಗೆ ಧಕ್ಕೆಯುಂಟಾಗಿದೆ ಎಂದು ಸಚಿವ ಮೊಹಿಂದ್ರಾ ನಿರ್ಣಯವನ್ನು ಓದಿದರು.


ಸಿಎಎ, ರಾಷ್ಟ್ರೀಯ ಪೌರತ್ವ ದಾಖಲಾತಿ(ಎನ್ ಆರ್ ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ದಾಖಲಾತಿ(ಎನ್ ಪಿಆರ್) ಬಗ್ಗೆ ಸದನದ ಆಶಯದಂತೆ ಸರ್ಕಾರ ನಡೆದುಕೊಳ್ಳುತ್ತದೆ ಎಂದು ಕಳೆದ ಮಂಗಳವಾರ ರಾಜ್ಯ ಕಾಂಗ್ರೆಸ್ ಹೇಳಿತ್ತು.


ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಸಮಾಜವನ್ನು ವಿಭಜಿಸುವ ಇಂತಹ ಕಾಯ್ದೆಯನ್ನು ಜಾರಿಗೆ ತರಲು ತಮ್ಮ ಸರ್ಕಾರ ಬಿಡುವುದಿಲ್ಲ ಎಂದು ಹೇಳಿದ್ದರು. ಇತ್ತೀಚೆಗೆ ಕೇರಳ ವಿಧಾನಸಭೆಯಲ್ಲಿ ಕೂಡ ಸಿಎಎ ವಿರುದ್ಧ ನಿರ್ಣಯ ಹೊರಡಿಸಲಾಗಿತ್ತು.

SCROLL FOR NEXT