ದೇಶ

ಧಾರ್ಮಿಕ ಕಾರಣಕ್ಕೆ ದೌರ್ಜನ್ಯವಾಗದೇ ಇದ್ದರೂ ಈ 3 ದಾಖಲೆಗಳಿಂದ ವಲಸಿಗರಿಗೆ ಸಿಗಲಿದೆ ಭಾರತೀಯ ಪೌರತ್ವ!

Srinivas Rao BV

ಗುವಾಹಟಿ: ಸಿಎಎ ಕಾಯ್ದೆಯ ಪ್ರಕಾರ ಬಾಂಗ್ಲಾದ ಅಕ್ರಮ ವಲಸಿಗರಿಗೆ ಭಾರತದ ಪೌರತ್ವ ದೊರೆಯುವುದು ಧಾರ್ಮಿಕ ಕಿರುಕುಳಕ್ಕೊಳಗಾಗಿರುವವರಿಗೆ ಮಾತ್ರ. ಆದರೆ ಅಸ್ಸಾಂ ನ ಹಣಕಾಸು ಸಚಿವ ಹಿಮಂತ ಬಿಸ್ವ ಶರ್ಮಾ ಬೇರೆಯದ್ದೇ ಹೇಳಿಕೆ ನೀಡಿದ್ದಾರೆ. 

ಪಾಕ್, ಬಾಂಗ್ಲಾ, ಅಫ್ಘಾನಿಸ್ತಾನಗಳಿಂದ ಬಂದಿರುವ ಮುಸ್ಲಿಮೇತರ ವಲಸಿಗರಿಗೆ ಯಾವುದೇ ಆಧಾರದಲ್ಲೂ, ಅಂದರೆ ಧಾರ್ಮಿಕ ಕಿರುಕುಳದ ಹೊರತಾಗಿಯೂ ಭಾರತಕ್ಕೆ ಬಂದರೆ ಅವರಿಗೆ ಸಿಎಎ ಪ್ರಕಾರ ಭಾರತದ ಪೌರತ್ವಕ್ಕೆ ಅವರು ಅರ್ಹರು ಎಂದು ಹೇಳಿದ್ದಾರೆ. 

ದೆಹಲಿಯಲ್ಲಿ ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿರುವ ಶರ್ಮಾ, ಸಿಎಎ ಫಲಾನುಭವಿಗಳು ಬಾಂಗ್ಲಾದೇಶ ಮುಂತಾದ ರಾಷ್ಟ್ರಗಳಲ್ಲಿ ತಾವು ಧಾರ್ಮಿಕ ಕಿರುಕುಳಕ್ಕೆ ಒಳಗಾಗಿದ್ದೇವೆ ಎಂಬುದಕ್ಕೆ ಸಾಕ್ಷ್ಯ ತೋರಿಸಲು ಸಾಧ್ಯವಿಲ್ಲ. ಏಕೆಂದರೆ ಅಲ್ಲಿಗೆ ಹೋಗಿ ಅವರು ಅಲ್ಲಿನ ಪೊಲೀಸ್ ಠಾಣೆಗಳಿಂದ ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ತರಲು ಸಾಧ್ಯವಿಲ್ಲ. ಆದ್ದರಿಂದ ವಲಸಿಗರು ಕೇವಲ ಮೂರು ದಾಖಲೆಗಳನ್ನು ಸಲ್ಲಿಸಿ ಭಾರತದ ಪೌರತ್ವ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ. 

ಸಿಎಎ ವ್ಯಾಪ್ತಿಯಲ್ಲಿ ಪೌರತ್ವಕ್ಕೆ ಅರ್ಜಿ ಸಲ್ಲಿಸುವವರು 2014 ರ ಡಿ.31ಕ್ಕೂ ಮುನ್ನ ತಾವು ಭಾರತಕ್ಕೆ ಬಂದಿರುವುದಕ್ಕೆ ದಾಖಲೆಗಳನ್ನು ತೋರಿಸಬೇಕು, ತಾವು ಹಿಂದೂ, ಕ್ರೈಸ್ತ, ಬೌದ್ಧ, ಸಿಖ್, ಪಾರ್ಸಿ, ಜೈನರೆನ್ನುವುದಕ್ಕೆ ಪುರಾವೆ ಒದಗಿಸಬೇಕು ಹಾಗೂ ತಾವು ಕಾಯ್ದೆಯಲ್ಲಿ ಉಲ್ಲೇಖಿಸಲಾಗಿರುವ ಮೂರು ರಾಷ್ಟ್ರಗಳಿಂದ ಬಂದವರಾಗಿದ್ದೇವೆ ಎಂಬುದನ್ನು ಸಾಬೀತುಪಡಿಸಬೇಕು ಎಂದು ಹೇಳಿದ್ದಾರೆ. 

ಇದೇ ವೇಳೆ ಸಿಎಎ ಅಡಿಯಲ್ಲಿ ಪೌರತ್ವ ಪಡೆಯುತ್ತಿರುವವರು ಅವರು ಬಂದಿರುವ ದೇಶಗಳಲ್ಲಿ ಧಾರ್ಮಿಕ ಕಾರಣಗಳಿಗೆ ದೌರ್ಜನ್ಯಕ್ಕೆ ಒಳಗಾಗಿದ್ದಾರೆಯೇ ಎಂಬುದನ್ನು ಕೇಂದ್ರ ಸರ್ಕಾರ ತನ್ನ ಸಂಸ್ಥೆಗಳ ಮೂಲಕ ಕಂಡುಕೊಳ್ಳಬೇಕು ಎಂದು ಶರ್ಮಾ ಹೇಳಿದ್ದಾರೆ. 
 

SCROLL FOR NEXT