ದೇಶ

ಪ್ರತಿಭಟನೆ ನಡುವೆ ವಿಕೇಂದ್ರಿಕೃತ ಆಂಧ್ರ ಅಭಿವೃದ್ಧಿ ವರದಿಗೆ ಜಗನ್ ಸಂಪುಟ ಅನುಮೋದನೆ 

Nagaraja AB

ವಿಜಯವಾಡ: ವಿಕೇಂದ್ರಿಕೃತ ಆಂಧ್ರ ಪ್ರದೇಶ ಅಭಿವೃದ್ಧಿಗೆ ಸಂಬಂಧಿಸಿದಂತೆ  ಜಿಎನ್ ರಾವ್ ಕಮಿಟಿ ಮತ್ತು ಬೊಸ್ಟನ್ ಸಲಹಾ ಗ್ರೂಪ್ ( ಬಿಸಿಜಿ) ವರದಿ ಪರಿಶೀಲನೆಗೆ ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿ ಸಲ್ಲಿಸಿರುವ ವರದಿಗೆ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಪ್ರದೇಶ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.

ವಿಕೇಂದ್ರಿಕೃತ ಆಂಧ್ರ ಅಭಿವೃದ್ದಿ ಹಾದಿ ಸುಗಮವಾಗಿಸುವ ಇನ್ನಿತರ ಪ್ರಮುಖ ಬಿಲ್ ಗಳೊಂದಿಗೆ ಈ ವರದಿಯನ್ನು ರಾಜ್ಯ ವಿಧಾನಸಭೆಯಲ್ಲಿ ಚರ್ಚೆಗಾಗಿ ಮಂಡಿಸುವ ಸಾಧ್ಯತೆ ಇದೆ. 

ಉನ್ನತ ಮಟ್ಟದ ಸಮಿತಿ ವರದಿಗೆ ಅನುಮೋದನೆ ಹೊರತುಪಡಿಸಿದಂತೆ 11 ಸಾವಿರ ರೈತ ಬಾರೊಸಾ ಸೆಂಟರ್ ಸ್ಥಾಪನೆಗೂ ಒಪ್ಪಿಗೆ ನೀಡಲಾಗಿದೆ.

ಮೂರು ರಾಜಧಾನಿ ಯೋಜನೆಯಂತೆ ಅಮರಾವತಿಯಿಂದ ವಿಶಾಖಪಟ್ಟಣಂಗೆ ಸಚಿವಾಲಯ ಸ್ಥಳಾಂತರ ಮಾಡುವ ಸರ್ಕಾರದ ಉದ್ದೇಶವನ್ನು ವಿರೋಧಿಸಿ ಅಮರಾವತಿ, ವಿಜಯವಾಡ ಹಾಗೂ ಗುಂಟೂರಿನಲ್ಲಿ ಪ್ರತಿಭಟನೆಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆ ನಡುವೆ ಸಂಪುಟ ಸಭೆಯನ್ನು ನಡೆಸಲಾಯಿತು. 

ಸಚಿವ ಸಂಪುಟ ಸಭೆ ಮುಗಿಯುತ್ತಿದ್ದಂತೆ ವಿಧಾನಸಭಾ ಕಾರ್ಯ ಕಲಾಪ ಸಮಿತಿ ಸಭೆ ಸೇರಿ ಬಜೆಟ್ ಅಧಿವೇಶನದ ಅಜೆಂಡಾ ಕುರಿತಂತೆ ಚರ್ಚೆ ನಡೆಸಲಾಯಿತು.

ಈ ಮಧ್ಯೆ  ಅಧಿವೇಶನ ಸಂದರ್ಭದಲ್ಲಿ ವಿಧಾನಸಭೆ ಮುತ್ತಿಗೆಗೆ ಅಮರಾವತಿ ಪರಿರಕ್ಷಣಾ ಸಮಿತಿ ಕರೆ ನೀಡಿದ್ದರಿಂದ  ಸಚಿವಾಲಯ, ವಿಧಾನಸಭೆ ಸಂರ್ಪಕಿಸುವ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಟಿಡಿಪಿಯ ಅನೇಕ ಸಂಸದರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು ಹಾಗೂ ಮಾಜಿ ಶಾಸಕರನ್ನು ಪೊಲೀಸರು ಗೃಹ ಬಂಧನದಲ್ಲಿಟ್ಟಿದ್ದಾರೆ.

SCROLL FOR NEXT