ದೇಶ

ಅಲಹಾಬಾದ್ ಹೆಸರು ಬದಲಾವಣೆ: ಉತ್ತರ ಪ್ರದೇಶ ಸರ್ಕಾರಕ್ಕೆ 'ಸುಪ್ರೀಂ' ನೋಟಿಸ್ 

Nagaraja AB

ನವದೆಹಲಿ: ಅಲಹಾಬಾದ್ ನ್ನು ಪ್ರಯಾಗ್ ರಾಜ್ ಎಂದು ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ನೀಡಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ರೈಲ್ವೆ ನಿಲ್ದಾಣ, ಕೇಂದ್ರ ವಿಶ್ವವಿದ್ಯಾಲಯಗಳು, ಮತ್ತಿತರ ಸಂಸ್ಥೆಗಳ ಹೆಸರನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ, ಏಕೆಂದರೆ ಅವುಗಳು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿವೆ ಎಂದು ದೂರುದಾರರು ಹೇಳಿದ್ದಾರೆ.

500 ವರ್ಷಗಳ ಹಿಂದೆ ಮೊಘಲ್ ಸಾಮ್ರಾಟ ಅಕ್ಬರ್ ಮಾಡಿದ ತಪ್ಪನ್ನು ಸರಿಪಡಿಸುವ ನಿಟ್ಟಿನಲ್ಲಿ ಐತಿಹಾಸಿಕ ನಗರ ಅಲಹಾಬಾದ್ ಹೆಸರನ್ನು ಪ್ರಯಾಗ್ ರಾಜ್ ಎಂದು ಉತ್ತರ ಪ್ರದೇಶ ಸರ್ಕಾರ ಮರು ನಾಮಕರಣ ಮಾಡಿದೆ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ.  ಅಕ್ಬರ್ ಬದಲಾವಣೆ ಮಾಡಿದ ನಗರದ ಹಳೆಯ ಹೆಸರನ್ನು ಮತ್ತೆ ಇಡಲಾಗಿದೆ ಎಂದು ಬಿಜೆಪಿ ಸರ್ಕಾರ ಹೇಳುತ್ತಿದೆ. 

ಹೆಸರು ಬದಲಾವಣೆಗೆ ಪ್ರತಿಪಕ್ಷಗಳು, ಚಿಂತಕರು ಹಾಗೂ ಇತಿಹಾಸಕಾರರು ತೀವ್ರ ಟೀಕೆ ವ್ಯಕ್ತಪಡಿಸಿದ್ದರು. ಸರ್ಕಾರದಿಂದ ಇತಿಹಾಸವನ್ನು ತಿರುಚುವ ಕೆಲಸ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದರು.

1575ರಲ್ಲಿ ಅಕ್ಬರ್ ಅಲಹಾಬಾದ್ ಎಂದು ಹೆಸರಿಟ್ಟ. ಅಕ್ಬರ್ ಈ ನಗರವನ್ನು ವಶಪಡಿಸಿಕೊಳ್ಳುವ ಮುನ್ನ ಪ್ರಯಾಗ್ ಎಂದು ಕರೆಯಲಾಗುತಿತ್ತು. ಅಕ್ಬರ್ ಆಸ್ಥಾನದಲ್ಲಿದ್ದ ಅಬುಲ್ ಫಜಲ್ ಸೇರಿದಂತೆ ಕೆಲವು ಇತಿಹಾಸಕಾರರು ಇದನ್ನು ಪ್ರಿಯಾಗ್ ಎಂದು ಕರೆದಿದ್ದಾರೆ. ಋಗ್ವೇದ ಮತ್ತಿತರ ಹಲವು ಪುರಾಣಗಳಲ್ಲಿ ಈ ನಗರದ ಉಲ್ಲೇಖವಿದ್ದು, ಭಾರತದಲ್ಲಿ ಇಲ್ಲಿ ಧಾರ್ಮಿಕ ಮೌಲ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತಿತ್ತು ಎನ್ನಲಾಗಿದೆ. 

SCROLL FOR NEXT