ದೇಶ

ಲಖನೌನಲ್ಲಿ ತೀವ್ರಗೊಂಡ ಪೌರತ್ವದ ಕಿಚ್ಚು: ಅಮಿತ್ ಶಾ ಭೇಟಿ ಹಿನ್ನೆಲೆ ಹಲವರ ವಿರುದ್ಧ ಎಫ್ಐಆರ್ ದಾಖಲು

Manjula VN

ಲಖನೌ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹಲವು ಮಹಿಳಾ ಹೋರಾಟಗಾರರು ನಡೆಸುತ್ತಿರುವ ಪ್ರತಿಭಟನೆ 5ನೇ ದಿನಕ್ಕೆ ಕಾಲಿಟ್ಟಿದ್ದು, ಈ ನಡುವಲ್ಲೇ ಲಖನೌಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ. 

ಕಳೆದ ವಾರ ಜನವರಿ 17ರಿಂದಲೂ ಮಹಿಳಾ ಹೋರಾಟಗಾರರು ಪೌರತ್ವ ಕಾಯ್ದೆ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇದೀಗ ಹೋರಾಟ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಹೇಳಲಾಗುತ್ತಿದೆ. 

ಪೌರತ್ವ ಕಾಯ್ದೆ ಕುರಿತಂತೆ ಸರ್ಕಾರ ಯಾವುದೇ ಪ್ರತಿನಿಧಿಗಳು ನಮ್ಮೊಂದಿಗೆ ಮಾತುಕತೆ ನಡೆಸುವವರೆಗೂ ನಾವು ನಮ್ಮ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ. ಇಂದು ಅಮಿತ್ ಶಾ ಅವರು ಲಖನೌಗೆ ಭೇಟಿ ನೀಡುತ್ತಿದ್ದಾರೆ. ಪೌರತ್ವ ಕಾಯ್ದೆ ಕುರಿತಂತೆ ಜನರ ದಿಕ್ಕನ್ನು ತಪ್ಪಿಸಲಾಗುತ್ತಿದೆ ಎಂದು ಅಮಿತ್ ಶಾ ಹೇಳುತ್ತಿದ್ದಾರೆ. ಈ ಬಗ್ಗೆ ಅವರೇ ಮಾತನಾಡಬೇಕು. ನಮ್ಮ ಸಂಶಯಗಳನ್ನು ದೂರಾಗಿಸಬೇಕು. ಪ್ರತಿಭಟನೆ ನಡೆಸುವುದು ನಮ್ಮ ಸಾಂವಿಧಾನಿಕ ಹಕ್ಕು. ಪ್ರತಿಭಟನೆ ನಡೆಸಿದ 150 ಮಂದಿ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ ಎಂದು ಪ್ರತಿಭಟನಾಕಾರರೊಬ್ಬರು ಹೇಳಿಕೆ ನೀಡಿದ್ದಾರೆ. 

ಪ್ರತಿಭಟನೆಯಲ್ಲಿರುವವರು ಬಹುತೇಕರು ಮುಸ್ಲಿಂ ಮಹಿಳೆಯರಾಗಿದ್ದು, ಬಹುತೇಕ ಮಹಿಳೆಯರು ಬುರ್ಖಾ ಧರಿಸಿರುವುದು ಕಂಡು ಬಂದಿದೆ. ಪ್ರತಿಭಟನಾ ನಿರತ ಮಹಿಳೆಯರು ಪೌರತ್ವ ಕಾಯ್ದೆ, ನಾಗರೀಕ ನೋಂದಣಿ ಕಾಯ್ದೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಬೇಡ ಎಂಬ ಘೋಷಣಾ ವಾಕ್ಯಗಳನ್ನು ಕೂಗುತ್ತಿದ್ದಾರೆ. ನಮ್ಮ ಭಾಷಣ, ನಮ್ಮ ಸ್ವಾತಂತ್ರ್ಯ, ಸತ್ಯ ಹಾಗೂ ಸಮಾನತೆ ಪರ ಹೋರಾಟದ ಮೇಲೆ ನೀವು ಸೆಕ್ಷನ್ 144 ಜಾರಿ ಮಾಡಲು ಸಾಧ್ಯವಿಲ್ಲ ಎಂದು ಹೋರಾಟಗಾರರು ಹೇಳಿದ್ದಾರೆ. 

ಪೌರತ್ವ ಕಾಯ್ದೆ ಹಾಗು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಕಾಯ್ದೆ ವಿರುದ್ದ ನಾವು ಪ್ರತಿಭಟಿಸುತ್ತಿದ್ದಾರೆ. ಇದು ನಮ್ಮ ದೇಶ. ನಮ್ಮ ಪೌರತ್ವಕ್ಕೆ ಸಾಕ್ಷ್ಯ ಕೇಳುವ ಹಾಗಿಲ್ಲ. ನಾವಿಲ್ಲಿಯೇ ಇರುತ್ತೇವೆ. ಮೋದಿ ಸರ್ಕಾರದ ಅಡಿಯಲ್ಲಿ ದೇಶಕ್ಕೆ ಏನೇ ಆದರೂ, ನಾವು ಅದರ ವಿರುದ್ಧ ಹೋರಾಡುತ್ತೇನೆ. ನಮ್ಮ ಭವಿಷ್ಯ ಸುರಕ್ಷಿತವಾಗಿಲ್ಲ. ನನ್ನ ಮಕ್ಕಳಿಗಾಗಿ ನಾನಿಲ್ಲಿದ್ದೇನೆ. ಸಿಎಎ, ಎನ್'ಪಿಆರ್ ಹಾಗೂ ಎನ್'ಸಿಆರ್ ಹಿಂಪಡೆಯುವವರೆಗೂ ನಾನು ಇಲ್ಲಿಂದ ಹೋಗುವುದಿಲ್ಲ ಎಂದು ಮಹಿಳಾ ಹೋರಾಟಗಾರರೊಬ್ಬರು ತಿಳಿಸಿದ್ದಾರೆ. 

ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ನಾವು ಕಂಬಳಿಗಳನ್ನು ತಂದಿದ್ದೆವು. ಆದರೆ, ಅವುಗಳನ್ನು ಪೊಲೀಸರು ಕಸಿದುಕೊಂಡಿದ್ದಾರೆ. ಕಾಯ್ದೆಯನ್ನು ಸರ್ಕಾರ ಹಿಂಪಡೆಯುವವರೆಗೂ ನಾವು ನಮ್ಮ ಪ್ರತಿಭಟನೆಯನ್ನು ಮುಂದುವರೆಸುತ್ತೇನೆ. ರಾತ್ರಿಯಿಡೀ ಮಹಿಳೆಯರು ಪ್ರತಿಭಟನೆ ನಡೆಸುತ್ತಾರೆ. ಪ್ರತಿಭಟನಾ ಸ್ಥಳದಲ್ಲಿ ಶೌಚಾಲಯ ಹಾಗೂ ಬೀದಿ ದೀಪಗಳನ್ನು ರಾತ್ರಿ ವೇಳೆ ಕಡಿತಗೊಳಿಸಲಾಗುತ್ತಿದೆ ಇದರಿಂದ ನಮಗೆ ಸಮಸ್ಯೆಯಾಗುತ್ತಿದೆ ಎಂದಿದ್ದಾರೆ. 

ಗೃಹ ಸಚಿವ ಅಮಿತ್ ಶಾ ಅವರು ಇಂದು ಲಖನೌಗೆ ಭೇಟಿ ನೀಡುತ್ತಿದ್ದು, ಪೌರತ್ವ ಕಾಯ್ದೆ ಪರವಾಗಿ ಆಯೋಜಿಸಲಾಗಿರುವ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ರ್ಯಾಲಿಯನ್ನು ಬಾಂಗ್ಲಾ ಬಜಾರ್ ನಲ್ಲಿರುವ ರಾಮ್ ಕಥಾ ಪಾರ್ಕ್'ನಲ್ಲಿ ಆಯೋಜಿಸಲಾಗಿದೆ. 

SCROLL FOR NEXT