ದೇಶ

ಪ್ರತಿಭಟನೆಗೆ ಜಗ್ಗುವುದಿಲ್ಲ, ಸಿಎಎ ಕಾಯ್ದೆ ಹಿಂಪಡೆಯುವುದಿಲ್ಲ, 13 ತಿಂಗಳೊಳಗೆ ಆಯೋಧ್ಯೆಯಲ್ಲಿ ರಾಮಮಂದಿರ: ಅಮಿತ್ ಶಾ

Srinivasamurthy VN

ಲಖನೌ: ಯಾರು ಎಂತಹುದೇ ಪ್ರತಿಭಟನೆ ಮಾಡಿದರೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವ ಮಾತೇ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಉತ್ತರ ಪ್ರದೇಶದ ಲಖನೌನಲ್ಲಿ ಇಂದು ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಪರ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತ್ ಶಾ, 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ, ಧರ್ಮದ ಆಧಾರದ ಮೇಲೆ ದೇಶವನ್ನು ಒಡೆಯುವ ಕೆಲಸವನ್ನು ಮಾಡಿತ್ತು. ಅಲ್ಪ ಸಂಖ್ಯಾತರನ್ನು ತಮ್ಮ ಓಟ್ ಬ್ಯಾಂಕ್ ಆಗಿ ಮಾಡಿಕೊಂಡು ಮತ್ತೊಂದು ವರ್ಗವನ್ನು ತಿರಸ್ಕರಿಸಿತ್ತು. ಆದರೆ ಬಿಜೆಪಿ ಎಲ್ಲ ಸಮುದಾಯವನ್ನು ಸಮಾನವಾಗಿ ಕಾಣುತ್ತಿದೆ ಎಂದು ಹೇಳಿದರು.

ಅಂತೆಯೇ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸುವವರು ಅದರ ವಿರುದ್ಧ ಆಧಾರರಹಿತ ವದಂತಿ ಹರಡುತ್ತಿದ್ದಾರೆ ಎಂದು ಗುಡುಗಿದ ಶಾ, ಸಿಎಎ ಯಾವುದೇ ವ್ಯಕ್ತಿಯ ಪೌರತ್ವವನ್ನು ಹೇಗೆ ಕಿತ್ತುಕೊಳ್ಳುತ್ತದೆ ಎಂಬುದನ್ನು ಸಾಬೀತುಪಡಿಸಿ ತೋರಿಸಲಿ. ಅಲ್ಲದೆ ಈ ವಿಚಾರವಾಗಿ ಸುಖಾಸುಮ್ಮನೆ ಪ್ರತಿಭಟನೆ ಮಾಡುತ್ತಿರುವ ವಿಪಕ್ಷಗಳಾದ ಕಾಂಗ್ರೆಸ್, ಎಸ್ ಪಿ, ತೃಣಮೂಲ ಕಾಂಗ್ರೆಸ್ ಮತ್ತು ಬಿಎಸ್ ಪಿ ಪಕ್ಷಗಳು ಈ ಕುರಿತು ಸಾರ್ವಜನಿಕವಾಗಿ ಚರ್ಚೆಗೆ ಬರಲಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್‌ಗೆ ಶಾ ಸವಾಲೆಸೆದರು.

'ಎಷ್ಟು ಬೇಕಾದರೂ ಪ್ರತಿಭಟನೆ ನಡೆಸಿ. ಕಾಯ್ದೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. 1947ರಲ್ಲಿ ಸ್ವಾತಂತ್ರ್ಯ ದೊರೆಯುವ ಸಂದರ್ಭದಲ್ಲಿ ದೇಶ ವಿಭಜನೆಯಾದದ್ದು ಕಾಂಗ್ರೆಸ್ ಮಾಡಿದ ಪಾಪದಿಂದಾಗಿ ಎಂದೂ ಅಮಿತ್ ಶಾ ಕೆಂಡ ಕಾರಿದರು. 

3 ತಿಂಗಳಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಆರಂಭ
ದೇಶದಲ್ಲಿ ಸುದೀರ್ಘ ಸಮಯ ಆಡಳಿತ ನಡೆಸಿದ್ದ ಕಾಂಗ್ರೆಸ್ ಪಕ್ಷ ರಾಮಮಂದಿರ ನಿರ್ಮಾಣ ಮಾಡಲಿಲ್ಲ. ಅದರ ನಿರ್ಮಾಣಕ್ಕೆ ಅನುವು ಮಾಡಿಕೊಡಲಿಲ್ಲ. ಆದರೆ ಇನ್ನು 3 ತಿಂಗಳಲ್ಲಿ ಗಗನಚುಂಬಿ ಭವ್ಯ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಶಾ ಹೇಳಿದರು.

SCROLL FOR NEXT