ದೇಶ

ನಾಗರಿಕ ಸ್ವಾತಂತ್ರ್ಯಕ್ಕೆ ಅಡ್ಡಿ: ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕ ಪಟ್ಟಿಯಲ್ಲಿ 10 ಸ್ಥಾನ ಕುಸಿದ ಭಾರತ

Lingaraj Badiger

ನವದೆಹಲಿ: ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕ ಪಟ್ಟಿಯಲ್ಲಿ ಭಾರತ ಬರೊಬ್ಬರಿ 10 ಸ್ಥಾನ ಕೆಳಗಿಳಿಯುವ ಮೂಲಕ 51ನೇ ಸ್ಥಾನಕ್ಕೆ ಕುಸಿದಿದ್ದು, ದೇಶದಲ್ಲಿ ನಾಗರಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದ್ದು ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ದಿ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (ಇಐಯು) ಪ್ರಕಟಿಸಿರುವ ವಾರ್ಷಿಕ ವರದಿಯಲ್ಲಿ, ನಾಗರಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿರುವುದೇ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತದ ಕುಸಿತಕ್ಕೆ ಕಾರಣ ಎಂದು ವಿವರಿಸಲಾಗಿದೆ.

2019 ರ ಸೂಚ್ಯಂಕದಲ್ಲಿ ಪ್ರಜಾಪ್ರಭುತ್ವದ ಸರಾಸರಿ ಜಾಗತಿಕ ಅಂಕಗಳು 2018 ರಲ್ಲಿದ್ದ 5.48 ರಿಂದ 5.44 ಕ್ಕೆ ಕುಸಿದಿದೆ ಎಂದು ವರದಿ ತಿಳಿಸಿದೆ.

2006 ರಲ್ಲಿ ಪ್ರಜಾಪ್ರಭುತ್ವ ಸೂಚ್ಯಂಕ ಪ್ರಾರಂಭವಾದಾಗಿನಿಂದ 2019 ರಲ್ಲಿ ಭಾರತದ ಶ್ರೇಯಾಂಕ ಅತ್ಯಂತ ಕಳಪೆಯಾಗಿದೆ. ಭಾರತದ ಒಟ್ಟಾರೆ ಅಂಕಗಳು 2018 ರಲ್ಲಿದ್ದ 7.23 ರಿಂದ 2019 ರಲ್ಲಿ 6.90 ಕ್ಕೆ ಇಳಿದಿದೆ. 

ಪ್ರಜಾಪ್ರಭುತ್ವ ಸೂಚ್ಯಂಕ ಪಟ್ಟಿಯಲ್ಲಿ ನಾರ್ವೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಐಸ್‌ಲ್ಯಾಂಡ್‌ ಹಾಗೂ ಸ್ವೀಡನ್‌ ಈ ಪಟ್ಟಿಯಲ್ಲಿ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದುಕೊಂಡಿವೆ. ನ್ಯೂಜಿಲೆಂಡ್‌ 4ನೇ ಸ್ಥಾನದಲ್ಲಿದ್ದು, ಕ್ರಮವಾಗಿ ಫಿನ್‌ಲ್ಯಾಂಡ್‌ (5), ಐರ್ಲೆಂಡ್‌ (6), ಡೆನ್ಮಾರ್ಕ್‌(7) , ಕೆನಡಾ (8) , ಆಸ್ಟ್ರೇಲಿಯಾ (9) ಹಾಗೂ ಸ್ವಿಟ್ಜರ್ಲೆಂಡ್‌ (10) ಟಾಪ್‌ 10 ಪಟ್ಟಿಯಲ್ಲಿವೆ. ಅಲ್ಲದೆ, ಚೀನಾ 153ನೇ ಸ್ಥಾನದಲ್ಲಿದ್ದು, ಉತ್ತರ ಕೊರಿಯಾ ಜಾಗತಿಕ ಸೂಚ್ಯಂಕದಲ್ಲಿ ಕಟ್ಟ ಕಡೆಯ ಅಂದರೆ 167ನೇ ಸ್ಥಾನ ಪಡೆದುಕೊಂಡಿದೆ. 

ಪ್ರಜಾಪ್ರಭುತ್ವದ ವಿವಿಧ ಪ್ರಕ್ರಿಯೆ ಮತ್ತು ಲಕ್ಷಣಗಳನ್ನು 5 ಸೂಚಿಗಳಾಗಿ ವಿಂಗಡಿಸಲಾಗಿದ್ದು, ಐದೂ ಸೂಚಿಗಳ ಅಡಿ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಆಯಾ ಸೂಚಿಯಲ್ಲಿ ಆಯಾ ದೇಶಗಳು ಪಡೆದ ಅಂಕಗಳನ್ನು ಆಧರಿಸಿ ಅವುಗಳ ರ‍್ಯಾಂಕ್‌ ಅನ್ನು ನಿಗದಿ ಮಾಡಲಾಗಿದೆ.
1. ಚುನಾವಣಾ ಪ್ರಕ್ರಿಯೆ ಮತ್ತು ಬಹುತ್ವಕ್ಕೆ ಮಾನ್ಯತೆ
2. ಸರ್ಕಾರದ ಕಾರ್ಯವೈಖರಿ
3. ರಾಜಕೀಯ ಭಾಗವಹಿಸುವಿಕೆ
4. ರಾಜಕೀಯ ಸಂಸ್ಕೃತಿ
5. ನಾಗರಿಕ ಸ್ವಾತಂತ್ರ್ಯ

2006ರಿಂದ ಪ್ರತಿ ವರ್ಷ ದಿ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್‌ ಈ ಸೂಚ್ಯಂಕ ಬಿಡುಗಡೆ ಮಾಡುತ್ತಿದೆ.

SCROLL FOR NEXT