ದೇಶ

ಪುಲ್ವಾಮದಲ್ಲಿ ಶೋಧ ಕಾರ್ಯಾಚರಣೆ ಪುನರಾರಂಭ, ಎರಡನೇ ದಿನ ಓರ್ವ ಉಗ್ರನ ಹತ್ಯೆ

Lingaraj Badiger

ಶ್ರೀನಗರ: ಕಾಶ್ಮೀರದ ದಕ್ಷಿಣ ಜಿಲ್ಲೆಯಾದ ಪುಲ್ವಾಮದಲ್ಲಿ ಭದ್ರತಾ ಪಡೆಗಳು ತೀವ್ರ ಶೋಧ ಕಾರ್ಯಾಚರಣೆಯನ್ನು ಪುನರಾರಂಭಿಸಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮಂಗಳವಾರ ಮಧ್ಯಾಹ್ನ 12ಕ್ಕೆ ಖ್ರೆವ್ ನ ಜಂತರಾಗ್ ಗ್ರಾಮದಲ್ಲಿ ಶುರುವಾದ ಗುಂಡಿನ ಚಕಮಕಿಯಲ್ಲಿ ಇದುವರೆಗೆ ಸೈನಿಕನೋರ್ವ ಮತ್ತು ಜಮ್ಮು-ಕಾಶ್ಮೀರ ಪೊಲೀಸ್ ವಿಶೇಷ ಕಾರ್ಯಾಚರಣೆ ತಂಡದ ಓರ್ವ ಯೋಧ ಹತಾತ್ಮರಾಗಿದ್ದಾರೆ. 

ಜಂತರಾಗ್ ಗೆ 2 ಕಿ.ಮೀ ದೂರದ ನಗ್ರಟನ್ ಗ್ರಾಮದಲ್ಲಿ ಓರ್ವ ಉಗ್ರ ಹತನಾಗಿದ್ದಾನೆ. ಈ ಪ್ರದೇಶವನ್ನು ಸುತ್ತುವರೆದಿರುವ ಭದ್ರತಾ ಪಡೆಗಳು ಇತ್ತೀಚಿನ ವರದಿ ಬರುವವರೆಗೆ ಕಾರ್ಯಾಚರಣೆ ಮುಂದುವರೆಸಿವೆ. 

ಕತ್ತಲಾದ್ದರಿಂದ ನಿನ್ನೆ ತಡರಾತ್ರಿ ಶೋಧ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು. ಆದರೂ ಉಗ್ರರು ಪರಾರಿಯಾಗುವುದನ್ನು ತಡೆಯಲು ಕೊರೆಯುವ ಚಳಿಯಲ್ಲೂ ಭದ್ರತಾಪಡೆಗಳನ್ನು ಅದೇ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. 

ಬೆಳಿಗ್ಗೆ ಬೆಳಕು ಹರಿಯುತ್ತಿದ್ದಂತೆ ಭದ್ರತಾ ಪಡೆಗಳು ಹತ್ತಿರದ ಅರಣ್ಯ ಸೇರಿದಂತೆ ಇಡೀ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪುನರಾರಂಭಿಸಿವೆ.  

ಜಂತರಗ್ ಗ್ರಾಮದಲ್ಲಿ ಉಗ್ರರು ಅಡಗಿದ್ದಾರೆಂಬ ನಿರ್ದಿಷ್ಟ ಮಾಹಿತಿ ಆಧರಿಸಿ ರಾಷ್ಟ್ರೀಯ ರೈಫಲ್ಸ್, ವಿಶೇಷ ಕಾರ್ಯಾಚರಣೆ ತಂಡ ಮತ್ತು ಸಿಆರ್ ಪಿಎಫ್ ಜಂಟಿಯಾಗಿ ದಚಿಗಾಮ್ ಮತ್ತು ತ್ರಾಲ್ ಅರಣ್ಯಗಳನ್ನು ಒಳಗೊಂಡ ಖ್ರೆವ್ ಪ್ರದೇಶವನ್ನು ಸುತ್ತುವರೆದು ಕಾರ್ಯಾಚರಣೆ ಆರಂಭಿಸಿದ್ದವು.

SCROLL FOR NEXT