ದೇಶ

'ಬುರ್ಖಾ ಸೇನೆ'ಯಂತೆ ವರ್ತಿಸುತ್ತಿರುವ ಶಿವಸೇನೆ: ಬಿಜೆಪಿ ವಕ್ತಾರ ಜಿವಿಎಲ್ ಲೇವಡಿ

Lingaraj Badiger

ನವದೆಹಲಿ: ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಅವರ ಜನ್ಮ ದಿನೋತ್ಸವವಾದ ಇಂದು ತನ್ನ ಮಾಜಿ ಮಿತ್ರ ಪಕ್ಷ ಶಿವಸೇನೆ,        ಕಾಂಗ್ರೆಸ್, ಎನ್‌ಸಿಪಿಯ ತುಷ್ಟೀಕರಣ ರಾಜಕೀಯ ನೀತಿಗಳಿಗೆ ಶರಣಾಗಿ 'ಬುರ್ಖಾ ಸೇನೆ' ಯಂತೆ ವರ್ತಿಸುತ್ತಿದೆ ಎಂದು ಬಿಜೆಪಿ     ಗುರುವಾರ ಆರೋಪಿಸಿದೆ.

ಶಿವಸೇನೆ ಈಗ ಬುರ್ಖಾ ಸೇನೆಯಂತೆ ತೀವ್ರ ರೀತಿಯಲ್ಲಿ ವರ್ತಿಸುತ್ತಿದೆ ..... ಶಿವಸೇನೆ ಹೆಸರು ಈಗ ತಪ್ಪಾಗಿ ಕೇಳಿಸುತ್ತಿದೆ ಎಂದು  ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಉದ್ಧವ್ ಠಾಕ್ರೆ ಪಕ್ಷ ಬದಲಾಗಿದೆ ....  ಠಾಕ್ರೆ ಎಂಬ ಹೆಸರು ನಿರ್ದಿಷ್ಟ ಸಿದ್ಧಾಂತವನ್ನು ಪ್ರತಿನಿಧಿಸುತ್ತದೆ. ಹಾಗಾಗಿ ನಾನು  ಅವರನ್ನು 'ಠಾಕ್ರೆ' ಎಂದು ಕರೆಯಲು ಬಯಸುವುದಿಲ್ಲ" ಎಂದು  ರಾವ್  ವ್ಯಂಗ್ಯವಾಡಿದ್ದಾರೆ. 

ಉದ್ಧವ್ ತಮ್ಮ ಪಕ್ಷದ ಸಿದ್ಧಾಂತಕ್ಕೆ ಬುರ್ಖಾ ತೊಡಿಸಲು ಹೋಗಿ ತ್ಯಾಗ ಬಲಿದಾನದ ಸಂಕೇತವಾಗಿರುವ ಕೇಸರಿಯನ್ನು ಬಲಿ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ನಡುವೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಹ, ಜನ್ಮ ದಿನದ ಅಂಗವಾಗಿ ಬಾಳಾ ಠಾಕ್ರೆ ಅವರಿಗೆ ಗೌರವ ಸಲ್ಲಿಸಿದ್ದಾರೆ. " ಬಾಳಾ  ಠಾಕ್ರೆಜೀ ಎಂದೂ ತಮ್ಮ ಆದರ್ಶಗಳೊಂದಿಗೆ ರಾಜಿ ಮಾಡಿಕೊಂಡಿರಲಿಲ್ಲ  ಎಂಬುದನ್ನು       ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.
 
ಬಾಳಾ ಸಾಹೇಬ್ ಜೀ ಅದ್ಭುತ ಬುದ್ದಿಜೀವಿ, ಸದಾ ತಮ್ಮ ವಾಕ್ ಕೌಶಲ್ಯದಿಂದ ಜನಸಮೂಹವನ್ನು  ಮಂತ್ರ ಮುಗ್ಧಗೊಳಿಸುತ್ತಿದ್ದರು. ತಮ್ಮ ತತ್ವ ಸಿದ್ಧಾಂತಗಳಿಗೆ ಸದಾ ಕಟಿಬದ್ದವಾಗಿ ನಿಂತಿದ್ದವರು. ಅವರು ತತ್ವ ಸಿದ್ಧಾಂತಗಳೊಂದಿಗೆ ಎಂದಿಗೂ ರಾಜಿ  ಮಾಡಿಕೊಳ್ಳಲಿಲ್ಲ, ಬಾಳಾ ಸಾಹೇಬ್ ಜಿ ಅವರ ಬದುಕು, ಮೌಲ್ಯಗಳು ನಮಗೆ  ಸದಾ ಸ್ಫೂರ್ತಿ ನೀಡುತ್ತಲೇ ಇರುತ್ತವೆ ಎಂದು ಶಾ ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ, ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಅವರಿಗೆ ಟ್ವೀಟರ್ ಮೂಲಕ ನಮನ ಸಲ್ಲಿಸಿದ್ದರು.

ಶಿವ ಸೇನೆ - ಬಿಜೆಪಿಯ ಮೊದಲ ಪ್ರಾದೇಶಿಕ ಮೈತ್ರಿ ಪಕ್ಷವಾಗಿತ್ತು.  ಆದರೆ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಕಳೆದ ವರ್ಷ  ನವೆಂಬರ್‌ನಲ್ಲಿ ಎನ್‌ಡಿಎ  ಮೈತ್ರಿಕೂಟದಿಂದ  ಹೊರನಡೆದು, ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆ ಕೈಜೋಡಿಸಿ  ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರವನ್ನು ರಚಿಸಿತು.

SCROLL FOR NEXT