ದೇಶ

ಸೋದರತ್ವ ಸಾರಿದ ಹಿಂದು ಕುಟುಂಬ: ಸಾವು, ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮುಸ್ಲಿಂ ಮಹಿಳೆಗೆ ಜೀವದಾನ ಮಾಡಿದ ವ್ಯಕ್ತಿ

Manjula VN

ಕೋಲ್ಕತಾ: ಜಾತಿ, ಧರ್ಮ ಹಿಡಿದು ಹಲವು ಕೆಸರೆರಚಾಟ ನಡೆಸುತ್ತಿರುವ ನಡುವಲ್ಲೇ ಹಿಂದೂ ಕುಟುಂಬವೊಂದು ಸಾವುಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮುಸ್ಲಿಂ ಮಹಿಳೆಗೆ ಅಂಗಾಂಗ ದಾನ ಮಾಡುವ ಮೂಲಕ ಸೋದರತ್ವವನ್ನು ಮೆರೆದು, ಇತರರಿಗೆ ಮಾದರಿಯಾಗಿದೆ. 

ಅಪಘಾತವೊಂದರಲ್ಲಿ ಕಲ್ಯಾಣ್ ಕುಮಾರ್ ರಾಯ್ ಚೌಧರಿ ಎಂಬುವವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದರು. ಇದೇ ವೇಳೆ ಮುಸ್ಲಿಂ ವ್ಯಕ್ತಿಯೊಬ್ಬರೂ ಕೂಡ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. 

ಇದರ ಮಾಹಿತಿ ತಿಳಿದ ಚೌಧರಿ ಕುಟುಂಸ್ಥರು ಕೂಡಲೇ ಮುಸ್ಲಿಂ ಮಹಿಳೆ ಸಹಾನಾ ಖತುನ್ ಅವರಿಗೆ ಯಕೃತ್ತನ್ನು ದಾನ ಮಾಡುವ ಮೂಲಕ ಮಹಿಳೆಗೆ ಜೀವದಾನವನ್ನು ಮಾಡಿದ್ದಾರೆ. 

ಸುಹಾನಾ ಅವರ ಸಂಕಷ್ಟವನ್ನು ತಿಳಿದ ಕೂಡಲೇ ಯಾವುದೇ ಯೋಚನೆ ಮಾಡದೆ ಅಂಗಾಂಗ ದಾನ ಮಾಡಲು ಒಪ್ಪಿಗೆ ಸೂಚಿಸಿದ್ದೆವು. ನಮ್ಮ ತಂದೆ ನಮ್ಮನ್ನು ತೊರೆದಿರಬಹುದು ಆದರೆ, ಅವರು ಮಹಿಳೆಯೊಬ್ಬರಿಗ ಜೀವ ನೀಡಿದ್ದಾರೆ ಎಂದು ಚೌಧರಿಯವರ ಪುತ್ರಿ ಅದ್ರಿಜಾ ಅವರು ಹೇಳಿದ್ದಾರೆ. 

ದಾನ ಮಾಡಲಾದ ಅಂಗಾಂಗವನ್ನು ಗ್ರೀನ್ ಕಾರಿಡಾರ್ ಮೂಲಕ ಕೇವಲ 10 ನಿಮಿಷಗಳಲ್ಲಿ ಎಸ್ಎಸ್'ಕೆಎಂ ಆಸ್ಪತ್ರೆಗೆ ಸಾಗಿಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಪ್ರಸ್ತುತ ಸಹನಾ ಅವರ ಆರೋಗ್ಯ ಉತ್ತಮವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. 

ಈ ಬಗ್ಗೆ ಸಹನಾ ಅವರ ಸಹೋದರ ಸಾಬಿರ್ ಅಲಿ ಮಾತನಾಡಿ, ಚೌಧರಿ ಕುಟುಂಬಕ್ಕೆ ಅತ್ಯಂತ ಕೃತಜ್ಞನಾಗಿದ್ದೇನೆ. ಪೌರತ್ವ ಕಾಯ್ದೆ ಕುರಿತು ಎಲ್ಲರೂ ಧರ್ಮದ ಕುರಿತು ಮಾತನಾಡುತ್ತಿದ್ದಾರೆ. ಧರ್ಮದ ಆಧಾರದ ಮೇಲೆ ರಾಜಕೀಯ ಪಕ್ಷಗಳು ಜನರನ್ನು ಒಡೆಯಲು ಯತ್ನಿಸುತ್ತಿದೆ. ಈ ಎಲ್ಲದರ ನಡುವೆ ಚೌಧರಿ ಕುಟುಂಬ ಇತರರಿಗೆ ಸೋದರತ್ವಕ್ಕೆ ಉದಾಹರಣೆಯಾಗಿದೆ. ಮುಂದೆ ಹಿಂದೂ ಕುಟುಂಬಕ್ಕೆ ಸಹಾಯ ಮಾಡುವ ಅವಕಾಶ ಬಂದರೆ, ಖಂಡಿತವಾಗಿಯೂ ಮಾಡುತ್ತೇನೆಂದು ತಿಳಿಸಿದ್ದಾರೆ. 

SCROLL FOR NEXT