ದೇಶ

ನಿರ್ಭಯಾ: ಗಲ್ಲು ಮುಂದೂಡುವ ವಕೀಲರ ತಂತ್ರ ವಿಫಲ; ಮತ್ತೊಂದು ಅರ್ಜಿ ತಿರಸ್ಕರಿಸಿದ ಕೋರ್ಟ್

Srinivasamurthy VN

ನವದೆಹಲಿ: ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಅಪರಾಧಿಗಳಾಗಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ 4 ಮಂದಿಯ ಗಲ್ಲು ಶಿಕ್ಷೆ ಮುಂದೂಡುವ ಅವರ ಪರ ವಕೀಲರ ಎಲ್ಲ ತಂತ್ರಗಾರಿಕೆಗಳು ಒಂದೊಂದೇ ವಿಫಲವಾಗುತ್ತಿದ್ದು, ಇದೀಗ ಅಪರಾಧಿಗಳ ಪರ ವಕೀಲರು ಸಲ್ಲಿಸಿದ್ದ ಮತ್ತೊಂದು ಅರ್ಜಿಯನ್ನು ದೆಹಲಿ ಕೋರ್ಟ್ ತಿರಸ್ಕರಿಸಿದೆ.

ಈ ಹಿಂದೆ ತಿಹಾರ್‌ ಜೈಲಧಿಕಾರಿಗಳು ಕೆಲವು ದಾಖಲೆಗಳನ್ನು ನೀಡಲು ವಿಳಂಬ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿ ಅಕ್ಷಯ್‌ ಕುಮಾರ್‌ ಸಿಂಗ್‌ (31), ಪವನ್‌ ಸಿಂಗ್‌ (25) ದಿಲ್ಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸೆಷನ್ ಕೋರ್ಟ್ ಹೆಚ್ಚುವರಿ ನ್ಯಾಯಾಧೀಶ ಅಜಯ್ ಕುಮಾರ್ ಜೈನ್ ಅವರು, ಅಪರಾಧಿಗಳ ಪರ ವಕೀಲರು ತಮಗೆ ಬೇಕಿದ್ದರೆ, ತಿಹಾರ್ ಜೈಲಧಿಕಾರಿಗಳಿಂದ ತಮಗೆ ಬೇಕಾದ ಅಗತ್ಯ ದಾಖಲೆಗಳ ನಕಲು ಪ್ರತಿಗಳನ್ನು, ಡೈರಿ ಮತ್ತು ಪೇಯಿಟಿಂಗ್ಸ್ ಗಳ ಮೊಬೈಲ್ ಫೋಟೋ ಕಾಪಿ ಪಡೆಯಬಹುದು ಎಂದು ಹೇಳಿದರು.

ಇದಕ್ಕೂ ಮೊದಲು ನಡೆದ ಪ್ರತಿವಾದದಲ್ಲಿ ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್, ತಿಹಾರ್ ಜೈಲಧಿಕಾರಿಗಳು ಈಗಾಗಲೇ ಪ್ರತಿವಾದಿ ವಕೀಲರಿಗೆ ಬೇಕಾದ ಎಲ್ಲ ಅಗತ್ಯಗಳನ್ನು ದಾಖಲೆಗಳನ್ನು ನೀಡಿದ್ದಾರೆ. ಪ್ರತಿವಾದಿ ವಕೀಲರು ಸುಖಾಸುಮ್ಮನೆ ಇಲ್ಲ ಸಲ್ಲದ ಅರ್ಜಿಗಳನ್ನು ಸಲ್ಲಿಸಿ ಗಲ್ಲು ಶಿಕ್ಷೆ ಮುಂದೂಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಜೈನ್ ಅವರು, ಅಪರಾಧಿಗಳ ಪರ ವಕೀಲರ ಅರ್ಜಿಯನ್ನು ವಜಾಗೊಳಿಸಿದರು.

SCROLL FOR NEXT