ದೇಶ

ಗಣರಾಜ್ಯೋತ್ಸವ: ಅಹಿಂಸೆ ಮಾರ್ಗ ಅನುಸರಿಸಿ, ಯುವಕರು, ದೇಶದ ಜನತೆಗೆ ರಾಷ್ಟ್ರಪತಿ ಕೋವಿಂದ್ ಸಂದೇಶ 

Srinivas Rao BV

ನವದೆಹಲಿ: ದೇಶದ ಜನತೆ, ಮುಖ್ಯವಾಗಿ ಯುವಕರು ನಿರ್ದಿಷ್ಟ ಕಾರಣಕ್ಕಾಗಿ ಹೋರಾಟ ಮಾಡುವಾಗ ಅಹಿಂಸೆಯ ಮಾರ್ಗವನ್ನು ಅನುಸರಿಸಬೇಕೆಂದು ರಾಷ್ಟ್ರಪತಿಗಳು ಕರೆ ನೀಡಿದ್ದಾರೆ. 

ಗಣರಾಜ್ಯೋತ್ಸವದ ಅಂಗವಾಗಿ ಜ.25 ರಂದು ದೇಶವನ್ನುದ್ದೇಶಿಸಿ ಮಾತನಾಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಸಾಮಾಜಿಕ ಹಾಗೂ ಆರ್ಥಿಕ ಉದ್ದೇಶಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಸಾಂವಿಧಾನಿಕ ವಿಧಾನಗಳಲ್ಲಿ ನಂಬಿಕೆ ಇಡಬೇಕೆಂದು ಹೇಳಿದ್ದಾರೆ. 

ಪೌರತ್ವ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳು ಹಿಂಸಾಚಾರ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು ತಮ್ಮ  ಭಾಷಣದಲ್ಲಿ ಈ ಅಂಶಗಳನ್ನು ಉಲ್ಲೇಖಿಸಿರುವುದು ಮಹತ್ವ ಪಡೆದುಕೊಂಡಿದೆ. 

ಆಧುನಿಕ ಭಾರತ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಎಂಬ ಮೂರು ಪ್ರಮುಖ ಅಂಗಗಳನ್ನು ಹೊಂದಿದ್ದು, ಇವು ಒಂದಕ್ಕೆ ಒಂದು ಪೂರಕವಾಗಿಯೂ ಸ್ವತಂತ್ರವಾಗಿಯೂ ಇವೆ. ಆದರೂ ನಾವು  ಗಣರಾಜ್ಯದ ನೇತೃತ್ವ ವಹಿಸಿದ್ದೇವೆ. ನಮ್ಮೆಲ್ಲರ ಭವಿಷ್ಯವನ್ನು ನಿರ್ಧರಿಸಲು ನಮಗೆ ದೇಶದ ಜನತೆ ಶಕ್ತಿ ನೀಡಿದ್ದಾರೆ. 
 
ಸರ್ಕಾರ ಹಾಗೂ ವಿಪಕ್ಷಗಳು ಬಹುಮುಖ್ಯ ಪಾತ್ರಗಳನ್ನು ಹೊಂದಿವೆ. ವಿಪಕ್ಷ ಹಾಗೂ ಆಡಳಿತ ಪಕ್ಷಗಳೆರಡೂ ದೇಶದ ಅಭಿವೃದ್ಧಿ, ಜನರ ಕಲ್ಯಾಣಗಳನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯಬೇಕೆಂದು ರಾಷ್ಟ್ರಪತಿಗಳು ಗಣರಾಜ್ಯೋತ್ಸವದ ಮುನ್ನ ದಿನದ ಭಾಷಣದಲ್ಲಿ ಸಂದೇಶ ನೀಡಿದ್ದಾರೆ. 

ಇದೇ ವೇಳೆ ಗಾಂಧಿಜಿ ಅವರ ಸತ್ಯ ಹಾಗೂ ಅಹಿಂಸೆಯ ಸಂದೇಶದ ಕುರಿತು ನಾವು ಆತ್ಮಾವಲೋಕನ ನಡೆಸುವುದು ನಮ್ಮ ಜೀವನದ ಭಾಗವಾಗಿರಬೇಕೆಂದೂ ರಾಷ್ಟ್ರಪತಿಗಳು ಹೇಳಿದ್ದಾರೆ.

SCROLL FOR NEXT