ದೇಶ

ಸಿಎಎ-ಎನ್‌ಆರ್‌ಸಿ-ಎನ್‌ಪಿಆರ್ ವಿರುದ್ಧ ನಿರ್ಣಯ: ರಾಜಸ್ಥಾನ ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ 

Nagaraja AB

ಜೈಪುರ: ಸಿಎಎ, ಎನ್ ಆರ್ ಸಿ ಮತ್ತು ಎನ್ ಪಿಆರ್ ವಿರುದ್ಧದ ನಿರ್ಣಯವೊಂದನ್ನು  ರಾಜಸ್ಥಾನ ವಿಧಾನಸಭೆಯಲ್ಲಿಂದು  ಮಂಡಿಸಲಾಗಿದ್ದು, ಈ ಕುರಿತ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ದಾರಿವಾಲ್ ಸದನದಲ್ಲಿ ನಿರ್ಣಯವನ್ನು ಮಂಡಿಸಿದ ಕೂಡಲೇ ಬಿಜೆಪಿ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿತು. ಆ ಪಕ್ಷದ ಶಾಸಕರು ಘೋಷಣೆ ಕೂಗಿ ಗದ್ದಲ ಉಂಟುಮಾಡಿದರು. 

ಒಂದು ವೇಳೆ ರಾಜಸ್ಥಾನದಲ್ಲಿ ನಿರ್ಣಯ ಅಂಗೀಕಾರವಾದರೆ ಸಿಎಎ, ಎನ್ ಆರ್ ಸಿ ಮತ್ತು ಎನ್ ಪಿಆರ್ ವಿರುದ್ಧ ನಿರ್ಣಯ ಕೈಗೊಂಡ ಮೊದಲ ರಾಜ್ಯವಾಗಿ ರಾಜಸ್ಥಾನ ಹೊರಹೊಮ್ಮಲಿದೆ. 

ಈವರೆಗೂ ಕೇರಳ ಹಾಗೂ ಪಂಜಾಬ್ ವಿಧಾನಸಭೆಯಲ್ಲಿ ಸಿಎಎ ಕುರಿತ ನಿರ್ಣಯವನ್ನು ಮಾತ್ರ ಅಂಗೀಕರಿಸಲಾಗಿದೆ. ಸಿಎಎ ಸಂವಿಧಾನದ ಮೂಲವನ್ನೇ ಉಲ್ಲಂಘಿಸಿದೆ. ಇದರಿಂದ ದೇಶದ ಅಪಾರ ಸಂಖ್ಯೆಯ ಜನರು ಭೀತಿಗೊಳಗಾಗಿದ್ದಾರೆ. ಎನ್ ಪಿಆರ್ ಹಾಗೂ ಎನ್ ಆರ್ ಸಿ ಪ್ರಸ್ತಾವನೆಯೂ ಇದೇ ಆಗಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ಎನ್‌ಪಿಆರ್‌ನ ಹೊಸ ನಿಬಂಧನೆಗಳನ್ನು ಹಿಂತೆಗೆದುಕೊಂಡ ನಂತರವೇ ಜನಗಣತಿ ಕಾರ್ಯಗಳನ್ನು ಮಾಡಬೇಕು.ಪೌರತ್ವ ತಿದ್ದುಪಡಿ ಕಾಯ್ದೆಯ ಇತ್ತೀಚಿನ ತಿದ್ದುಪಡಿಗಳು ಜನರನ್ನು ಧಾರ್ಮಿಕ ಆಧಾರದ ಮೇಲೆ ಪ್ರತ್ಯೇಕಿಸುತ್ತವೆ. ಭಾರತದ ಒಂದು ಭಾಗದ ವ್ಯಕ್ತಿಗಳಿಗೆ ಪೌರತ್ವವನ್ನು ಕಸಿದುಕೊಳ್ಳಲು ಇದನ್ನು  ರೂಪಿಸಲಾಗಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ. 

ಸಿಎಎಯಿಂದ ಯಾವುದೇ ಪ್ರಯೋಜನವಿಲ್ಲ, ಆದ್ದರಿಂದ ಕೂಡಲೇ ಈ ಕಾಯ್ದೆಯನ್ನು ವಾಪಾಸ್ ಪಡೆಯಬೇಕು. ರಾಷ್ಟ್ರೀಯ ಜನಸಂಖ್ಯಾ ನೋಂದಣಿ ನವೀಕರಣ ಪ್ರಸ್ತಾವವನ್ನು ಕೂಡಾ ಕೇಂದ್ರ ಸರ್ಕಾರ ಹಿಂಪಡೆಯಬೇಕು. ಎನ್ ಆರ್ ಪಿ ತಿದ್ದುಪಡಿಯನ್ನು ಹಿಂತೆಗೆದುಕೊಂಡ ಬಳಿಕ ಜನಗಣತಿ ಕಾರ್ಯವನ್ನು ಮಾಡಬೇಕು ಎಂದು ನಿರ್ಣಯದಲ್ಲಿ  ಒತ್ತಾಯಿಸಲಾಗಿದೆ. 

ದೇಶ ಸ್ವಾತಂತ್ರ್ಯ ಗೊಂಡ ಬಳಿಕ ಇದೇ ಮೊದಲ ಬಾರಿಗೆ ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸಲು ಸಿಎಎ ಜಾರಿಗೆ ತರಲಾಗಿದೆ.  ಶ್ರೀಲಂಕಾ, ಮ್ಯಾನ್ಮಾರ್, ನೇಪಾಳ, ಭೂತಾನ್ ಮತ್ತಿತರ ನೆರೆಯ ರಾಷ್ಟ್ರಗಳಿಂದ ವಲಸಿಗರಿಗೆ ಸಿಎಎಯಲ್ಲಿ ಯಾವುದೇ ವಿನಾಯಿತಿ ನೀಡಿಲ್ಲ, ಇದು ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ನಿರ್ಣಯದಲ್ಲಿ ಬರೆಯಲಾಗಿದೆ.

ಸಿಎಎ-ಎನ್ ಆರ್ ಸಿ ವಿರುದ್ಧ  ಅನೇಕ ಪ್ರತಿಭಟನೆ, ಪ್ರದರ್ಶನಗಳು ನಡೆದಿದ್ದ ರಾಜಸ್ಥಾನ ಈಗ ಸಂಪೂರ್ಣವಾಗಿ ಶಾಂತವಾಗಿದೆ. 

SCROLL FOR NEXT