ದೇಶ

'ಮೋದಿ ಮುಖವೇಕೆ ಯಾವಾಗಲೂ ಫಳ ಫಳ ಹೊಳೆಯುತ್ತಿರುತ್ತದೆ?': ಇದಕ್ಕೆ ಪ್ರಧಾನ ಮಂತ್ರಿಗಳು ಹೇಳಿದ್ದೇನು? 

Sumana Upadhyaya

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹೊಳೆಯುವ ಮುಖದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಮೋದಿಯವರು ಮುಖದ ಮೇಕಪ್ ಗೆ ಸಾಕಷ್ಟು ಖರ್ಚು ಮಾಡುತ್ತಾರೆ ಎಂದು ಪ್ರತಿಪಕ್ಷದವರು, ಅವರ ವಿರೋಧಿಗಳು ಟೀಕಿಸಿದ್ದೂ ಉಂಟು.  

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೆಲ ತಿಂಗಳ ಹಿಂದೆ ಮೋದಿಯವರ ಹೊಳೆಯುವ ಮುಖದ ಬಗ್ಗೆ ಮಾತನಾಡಿ, ನರೇಂದ್ರ ಮೋದಿ ಬೆಳಗ್ಗೆ ವ್ಯಾಕ್ಸ್​ ಮಾಡಿಸಿಕೊಂಡು ಮನೆಯಿಂದ ಹೊರಡುತ್ತಾರೆ. ಹಾಗಾಗಿ ಅವರ ಮುಖ ಫಳಫಳ ಹೊಳೆಯುತ್ತದೆ ಎಂದು ಟೀಕಿಸಿದ್ದರು. 


ಇದೀಗ ಈ ಬಗ್ಗೆ ಸ್ವತಃ ಮೋದಿಯವರೇ ಮಾತನಾಡಿದ್ದಾರೆ. ನಿನ್ನೆ ದೆಹಲಿಯಲ್ಲಿ ನಡೆದ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಕಾರ್ಯಕ್ರಮದಲ್ಲಿ ತಮ್ಮ ಹೊಳೆಯುವ ಮುಖಕಾಂತಿಯ ರಹಸ್ಯ ಬಿಚ್ಚಿಟ್ಟಿದ್ದಾರೆ. 


''ಹಲವು ವರ್ಷಗಳ ಹಿಂದೆ ಹೀಗೆ ಯಾರೋ ಒಬ್ಬರು ನನ್ನ ಬಳಿ ಕೇಳಿದ್ದರು. ನಿಮ್ಮ ಮುಖ ಇಷ್ಟೊಂದು ಕಾಂತಿಯುಕ್ತವಾಗಿರಲು ಕಾರಣ ಏನು ಎಂದು. ಆಗ ನಾನು ತುಂಬ ಸರಳವಾಗಿ ಉತ್ತರಿಸಿದೆ. ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ. ಮುಖದಿಂದ ಬೆವರಿಳಿಯುತ್ತದೆ. ಕೆಲಸ ಮಾಡಿ ಬೆವರಿನಲ್ಲಿಯೇ ನನ್ನ ಮುಖ ಮಸಾಜ್ ಮಾಡಿಕೊಳ್ಳುತ್ತೇನೆ, ಅದರಿಂದ ನನ್ನ ಮುಖ ಹೊಳೆಯುತ್ತಿರುತ್ತದೆ ಎಂದು ಹೇಳಿದ್ದೆ'' ಎಂದು ನರೇಂದ್ರ ಮೋದಿ ಮಕ್ಕಳ ಮುಂದೆ ಹೇಳಿದರು.


ಅಂದರೆ ಮೋದಿಯವರು ಮಕ್ಕಳಿಗೆ ಸಹ ಇದೇ ರೀತಿ ಕಷ್ಟಪಟ್ಟು ಬೆವರು ಸುರಿಸಿ ಕೆಲಸ ಮಾಡಿ ಎಂದು ಸಲಹೆ ನೀಡಿದ್ದಾರೆ.ಬಾಲ ಪುರಸ್ಕಾರ ಪಡೆದ ಮಕ್ಕಳನ್ನು ಶ್ಲಾಘಿಸಿದ ಮೋದಿಯವರು, ನಾನು ನಿಮ್ಮೆಲ್ಲರಿಂದ ಸ್ಫೂರ್ತಿ ಮತ್ತು ಶಕ್ತಿ ಪಡೆದಿದ್ದೇನೆ ಎಂದು ಹೇಳಿದರು.


ನೀರು ಮತ್ತು ಜ್ಯೂಸ್ ಕುಡಿದರೆ ಮಾತ್ರ ಆರೋಗ್ಯ ಬರುವುದಲ್ಲ, ಶಾರೀರಿಕವಾಗಿ ನಾವು ದಿನನಿತ್ಯ ಚಟುವಟಿಕೆಯಿಂದಿರಬೇಕು ಎಂದು ಸಹ ಮೋದಿ ಹೇಳಿದರು.


ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿಯನ್ನು 5ರಿಂದ 18 ವರ್ಷದೊಳಗಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಪ್ರತಿವರ್ಷ ನೀಡಲಾಗುತ್ತದೆ. ಪ್ರಶಸ್ತಿಯು ಪದಕ, 1 ಲಕ್ಷ ರೂಪಾಯಿ ನಗದು ಮತ್ತು ಪ್ರಮಾಣಪತ್ರಗಳನ್ನು ಹೊಂದಿರುತ್ತದೆ. 

SCROLL FOR NEXT