ದೇಶ

ಪ್ರಚೋದನಾಕಾರಿ ಹೇಳಿಕೆ: ಹೋರಾಟಗಾರ ಶರ್ಜೀಲ್ ಇಮಾಮ್ ಮನೆ ಮೇಲೆ ಅಧಿಕಾರಿಗಳ ದಾಳಿ, ಸಂಬಂಧಿಕರು ವಶಕ್ಕೆ

Manjula VN

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪ ಎದುರಿಸುತ್ತಿರುವ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಹಾಗೂ ಹೋರಾಟಗಾರ ಶರ್ಜೀಲ್ ಇಮಾಮ್ ಅವರ ಮನೆ ಮೇಲೆ ಕೇಂದ್ರೀಯ ಅಧಿಕಾರಿಗಳು ದಾಳಿ ನಡೆಸಿದ್ದು, ಕೆಲ ಸಂಬಂಧಿಕರನ್ನು ವಶಕ್ಕೆ ಪಡೆದುಕೊಂಡದ್ದಾರೆಂದು ವರದಿಗಳು ತಿಳಿಸಿವೆ. 

ಬಿಹಾರ ರಾಜ್ಯದ ಪಾಟ್ನಾದಲ್ಲಿರುವ ಶರ್ಜೀಲ್ ಅವರ ನಿವಾಸದ ಮೇಲೆ ಸ್ಥಳೀಯ ಪೊಲೀಸರ ಜೊತೆಗೂಡಿ ಕೇಂದ್ರೀಯ ಅಧಿಕಾರಿಗಳು ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ. 

ಪೌರತ್ವ ಕಾಯ್ದೆ ಹಾಗೂ ಎನ್ಆರ್'ಸಿಯನ್ನು ವಿರೋಧಿರುವ ಭರದಲ್ಲಿ ಇಮಾಮ್ ಅವರು ಪ್ರಚೋದನಾಕಾರಿ ಭಾಷಣ ಮಾಡಿದ್ದು, ಡಿ.13 ರಂದೂ ಕೂಡ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯಲ್ಲಿ ಇದೇ ರೀತಿ ಉದ್ರಿಕ್ತಗೊಳಿಸುವ ಭಾಷಣ ಮಾಡಿದ್ದರು ಎಂದು ಹೇಳಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಪೊಲೀಸರು ಇಮಾಮ್ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ. ಇದಷ್ಟೇ ಅಲ್ಲದೆ, ಉತ್ತರಪ್ರದೇಶ ಹಾಗೂ ಅಸ್ಸಾಂನಲ್ಲಿಯೂ ಇಮಾಮ್ ವಿರುದ್ಧ ಪ್ರಕರಣ ದಾಖಲಾಗಿದೆ. 

ಇಮಾಮ್ ಅವರ ಮನೆ ಮೇಲೆ ದಾಳಿ ನಡೆಸಿರುವುದನ್ನು ಜೆಹನಾಬಾದ್ ಎಸ್'ಪಿ ಮನೀಷ್ ಕುಮಾರ್ ಅವರು ದೃಢಪಡಿಸಿದ್ದಾರೆ. ಆದರೆ, ಪ್ರಕರಣ ಕುರಿತ ಮತ್ತಷ್ಟು ಮಾಹಿತಿ ನೀಡಲು ನಿರಾಕರಿಸಿದ್ದಾರೆ. 

ಈ ನಡುವೆ ದಾಳಿ ಮೇಲೆ ಇಮಾಮ್ ಅವರ ಕುಟುಂಬದ ಮೂವರು ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇಮಾಮ್ ಅವರಿಗೆ ಸಂಬಂಧಿಸಿದ ಕೆಲ ವಸ್ತು ಹಾಗೂ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ವರದಿಗಳು ತಿಳಿಸಿವೆ. 

SCROLL FOR NEXT