ದೇಶ

ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ: ಪ್ರಧಾನಿ ಮೋದಿ

Nagaraja AB

ನವದೆಹಲಿ: ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಹಾಗೂ ನೆರೆಯ ರಾಷ್ಟ್ರಗಳಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಬಿಜೆಪಿ ನೀಡಿದ್ದ ಆಶ್ವಾಸನೆ ಈಡೇರಿಸಲು  ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಾರ್ಷಿಕ ಪ್ರಧಾನ ಮಂತ್ರಿಗಳ ಎನ್ ಸಿಸಿ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ ನಂತರವೂ ಜಮ್ಮು ಮತ್ತು ಕಾಶ್ಮೀರದಲ್ಲಿ ಸಮಸ್ಯೆ ಮುಂದುವರೆದಿತ್ತು. ಕೆಲ ಕುಟುಂಬಗಳು ಮತ್ತು ರಾಜಕೀಯ ಪಕ್ಷಗಳು ಈ ಪ್ರದೇಶದಲ್ಲಿನ ಸಮಸ್ಯೆಗಳನ್ನು ಜೀವಂತವಾಗಿ" ಇಟ್ಟುಕೊಂಡಿದ್ದರ  ಪರಿಣಾಮವಾಗಿ ಅಲ್ಲಿ ಭಯೋತ್ಪಾದನೆ ಬೆಳೆದಿತ್ತು ಎಂದರು. ಪ್ರಸ್ತುತ ಸರ್ಕಾರವು ದೇಶವನ್ನು ಬಾಧಿಸುತ್ತಿರುವ ದಶಕಗಳಷ್ಟು ಹಳೆಯದಾದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.

ನೆರೆಯ ಪಾಕಿಸ್ತಾನ ದೇಶವು ಮೂರು ಯುದ್ಧಗಳಲ್ಲಿ ಸೋತಿದೆ.  ಆದರೆ ಭಾರತದ ವಿರುದ್ಧ ಶೀತಲ ಸಮರವನ್ನು ಮುಂದುವರೆಸಿದೆ ಎಂದು ವಾಗ್ದಾಳಿ ನಡೆಸಿದರು. 

ಹಿಂದಿನ ಸರ್ಕಾರಗಳು ಈ ಸಮಸ್ಯೆಯನ್ನು ಕಾನೂನು ಸುವ್ಯವಸ್ಥೆ ಎಂದು ಪರಿಗಣಿಸಿದ್ದವು. ಸೈನ್ಯಗಳು ಕ್ರಮ ಕೈಗೊಳ್ಳಲು ಕೇಳಿದಾಗಲೂ ಅವರು ಮುಂದೆ ಹೋಗುತ್ತಿರಲಿಲ್ಲ ಎಂದು  ಕೇಂದ್ರದಲ್ಲಿ ಹಿಂದಿನ ಸರ್ಕಾರಗಳ ನಿಷ್ಕ್ರಿಯತೆಯನ್ನು ದೂಷಿಸಿದರು.

ಪ್ರಸ್ತುತ ಜಮ್ಮು- ಕಾಶ್ಮೀರ ಮಾತ್ರವಲ್ಲ, ದೇಶದ ಎಲ್ಲಾ ಕಡೆಗಳಲ್ಲಿ ಶಾಂತಿ ನೆಲೆಸಿದೆ. ದಶಕಗಳ ಕಾಲ ನಿರ್ಲಕ್ಷಿಸಲ್ಪಟ್ಟಿದ್ದ ಈಶಾನ್ಯ ವಲಯದ ಆಶೋತ್ತರಗಳನ್ನು ಸರ್ಕಾರ ನಿರ್ವಹಿಸುತ್ತಿದೆ. ಬೊಡೋ ಒಪ್ಪಂದ, ತ್ರಿವಳಿ ತಲಾಕ್, ಜಮ್ಮು- ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ 370 ನೇ ವಿಧಿ ರದ್ದು ಸೇರಿದಂತೆ ಅನೇಕ ಸಾಧನೆಗಳನ್ನು ಮಾಡಲಾಗಿದೆ ಎಂದು ಪ್ರಧಾನಿ ವಿವರಿಸಿದರು.

SCROLL FOR NEXT