ದೇಶ

ಗೌತಮ್ ಗಂಭೀರ್ ಜಿಲೇಬಿ ತಿನ್ನುವುದರಲ್ಲಿ ಮಗ್ನರಾಗಿರಬೇಕು: ದೆಹಲಿ ಶಾಲೆಗಳ ಕುರಿತ ಬಿಜೆಪಿ ವರದಿಗೆ ಸಿಸೋಡಿಯಾ ಕಿಡಿ

Lingaraj Badiger

ನವದೆಹಲಿ: ಎಂಟು ಬಿಜೆಪಿ ಸಂಸದರು ದೆಹಲಿ ಶಾಲೆಗಳಿಗೆ ಭೇಟಿ ನೀಡಿ, ಶಾಲೆಗಳು ಕೆಟ್ಟ ಪರಿಸ್ಥಿತಿಯಲ್ಲಿವೆ ಎಂಬ ವರದಿ ನೀಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ಅದು ಮೋಸದ ವರದಿಯಾಗಿದ್ದು, ಶಾಲೆಗಳ ನಿಜ ಸ್ಥಿತಿ ತೋರಿಸುವಂತೆ ಹೇಳಿದ್ದಾರೆ.

ಬಿಜೆಪಿ ಸಂಸದರು ವರದಿ ನೀಡಿದ ಮಾರನೇ ದಿನ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ಹಾಗೂ ಸಿಸೋಡಿಯಾ ಅವರು, ಅದೇ ಶಾಲೆಗಳ ವಾಸ್ತವಾಂಶದ ವಿಡಿಯೋ ತೋರಿಸಿದ್ದಾರೆ. ಅಲ್ಲದೆ ಬಿಜೆಪಿ ಆ ಶಾಲೆಗಳ ಸಂಪೂರ್ಣ ಚಿತ್ರಣವನ್ನು ಮರೆಮಾಚಿದೆ ಎಂದು ಆರೋಪಿಸಿದ್ದಾರೆ.

ಗೌತಮ್ ಗಂಭೀರ್ ಅವರು ಕಳೆದ ಅಕ್ಟೋಬರ್ 2019ರಿಂದ ನವೀಕರಣಕ್ಕಾಗಿ ಬಂದ್ ಮಾಡಲಾಗಿರುವ ಶಾಲೆಯ ಕಟ್ಟಡವನ್ನು ತೋರಿಸಿದ್ದಾರೆ. ಇನ್ನು ಬಿಜೆಪಿ ಸಂಸದ ಪರ್ವೀಶ್ ವರ್ಮಾ ಅವರು ಹೊಸ ಕಟ್ಟಡದ ಬದಲು ಹಳೆ ಕಟ್ಟಡವನ್ನು ತೋರಿಸಿದ್ದಾರೆ ಎಂದು ದೂರಿದರು.

ನಾವು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದ್ದೇವೆ. ನಮ್ಮ ಬಗ್ಗೆ ಇಡೀ ಜಗತ್ತು ಮಾತನಾಡುತ್ತಿದೆ. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿ ಶಿಕ್ಷಣದ ಮಾದರಿ ಬಗ್ಗೆ ಮತ್ತು ವಿದ್ಯಾರ್ಥಿಗಳನ್ನು ಅಪಹಾಸ್ಯ ಮಾಡಿರುವುದು ದುರದೃಷ್ಟಕರ ಎಂದು ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಾರೆ.

ದೆಹಲಿ ಬಿಜೆಪಿ ಸಂಸದರು ಅಮಿತ್ ಶಾ ಅವರಿಗೆ ನೀಡಿದ ವರದಿ ಮೋಸದ ವರದಿ. ಬಿಜೆಪಿ ಸಂಸದರು ಭೇಟಿ ನೀಡಿದ ಶಾಲೆಯಲ್ಲಿ ನವೀಕರಣ ಕಾರ್ಯ ನಡೆಯುತ್ತಿರುವುದನ್ನು ಗೌತಮ್ ಗಂಭೀರ್ ಅವರಿಗೆ ಕಾಣಿಸಲಿಲ್ಲವೇ? ಬಹುಶಃ ಅವರು ಜಿಲೇಬಿ ತಿನ್ನುವುದರಲ್ಲಿ ಮಗ್ನರಾಗಿದ್ದರು ಅಂತ ಕಾಣಿಸುತ್ತೆ ಎಂದು ಸಿಸೋಡಿಯಾ ಅವರು ವ್ಯಂಗ್ಯವಾಡಿದ್ದಾರೆ.

SCROLL FOR NEXT