ದೇಶ

ಶ್ರೀನಗರದಲ್ಲಿ ಎನ್'ಕೌಂಟರ್: ಓರ್ವ ಸಿಆರ್'ಪಿಎಫ್ ಯೋಧ ಹುತಾತ್ಮ, ಉಗ್ರನ ಹತ್ಯೆ

Manjula VN

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭಾರತೀಯ ಸೇನಾಪಡೆಗಳು ಎನ್'ಕೌಂಟರ್ ನಡೆಸಿದ್ದು, ಕಾರ್ಯಾಚರಣೆ ವೇಳೆ ಓರ್ವ ಸಿಆರ್'ಪಿಎಫ್ ಯೋಧ ಹುತಾತ್ಮರಾಗಿ, ಓರ್ವ ಉಗ್ರನ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. 

ಶ್ರೀನಗರದ ಮಲ್ಭಾಗ್ ನಲ್ಲಿ ಕಳೆದ ರಾತ್ರಿ ಈ ಎನ್'ಕೌಂಟರ್ ನಡೆದಿದೆ ಎಂದು ವರದಿಗಳು ತಿಳಿಸಿವೆ. ಮಲ್ಭಾಗ್ ನಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆಂಬ ಮಾಹಿತಿ ತಿಳಿದುಬರುತ್ತಿದ್ದಂತೆಯೇ ಸೇನಾ ಪಡೆಗಳು ಕಾರ್ಯಾಚರಣೆ ನಡೆಸಲು ಆರಂಭಿಸಿದ್ದವು. 

ಈ ವೇಳೆ ಅಡಗಿ ಕುಳಿತಿದ್ದ ಉಗ್ರರು ಏಕಾಏಕಿ ಸೇನಾಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಮೂವಹರು ಯೋಧರು ಗಾಯಗೊಂಡಿದ್ದು, ಕೂಡಲೇ ಅವರನ್ನು 92 ಬೇಸ್ ಆರ್ಮಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಇದರಲ್ಲಿ ಇಬ್ಬರು ಯೋಧರು ಚೇತರಿಸಿಕೊಳ್ಳುತ್ತಿದ್ದು, ಓರ್ವ ಯೋಧ ಹುತಾತ್ಮರಾಗಿದ್ದಾರೆಂದು ತಿಳಿದುಬಂದಿದೆ. 

ಹುತಾತ್ಮರಾದ ಯೋಧರನ್ನು ಕುಲ್ದೀಪ್ ಉರಾನ್ ಎಂದು ಗುರ್ತಿಸಲಾಗಿದೆ. ಪ್ರಸ್ತುತ ಸ್ಥಳದಲ್ಲಿ ಮತ್ತಷ್ಟು ಉಗ್ರರು ಅಡಗಿ ಕುಳಿತಿರುವ ಮಾಹಿತಿಗಳು ಬಂದಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಸೇನಾಪಡೆಗಳು ಕಾರ್ಯಾಚರಣೆ ಮುಂದುವರೆಸಿವೆ ಎನ್ನಲಾಗುತ್ತಿದೆ. 


ಅನಂತ್ ನಾಗ್ ಜಿಲ್ಲೆಯ ಬಿಜ್ಬೇಹ್ರಾ ಎಂಬ ಪ್ರದೇಶದಲ್ಲಿ ಎರಡು ದಿನಗಳ ಹಿಂದಷ್ಟೇ ಉಗ್ರರು ದಾಳಿ ನಡೆಸಿದ್ದರು. ದಾಳಿಯಲ್ಲಿ 6 ವರ್ಷದ ಬಾಲಕ ಸಾವನ್ನಪ್ಪಿದ್ದ. ಅಲ್ಲದೆ, ಸಿಆರ್'ಪಿಎಫ್ ಯೋಧ ಕೂಡ ಹುತಾತ್ಮರಾಗಿದ್ದರು. ಈ ಇಬ್ಬರನ್ನೂ ಬಲಿ ಪಡೆದಿದ್ದ ಉಗ್ರರನ್ನು ಇಂದು ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರದ ಐಜಿಪಿ ಮಾಹಿತಿ ನೀಡಿದ್ದಾರೆ. ಹತ್ಯೆಯಾದ ಉಗ್ರರನ್ನು ಝಾಹಿದ್ ದಾಸ್ ಎಂದು ಗುರ್ತಿಸಲಾಗಿದೆ. 

SCROLL FOR NEXT