ದೇಶ

ಯಾವ ಟೈಗರ್, ಪೇಪರ್ ಟೈಗರ್ ಅಥವಾ ಸರ್ಕಸ್ ಟೈಗರ್?: ಸಿಂಧಿಯಾಗೆ ಕಮಲ್ ನಾಥ್ ಟಾಂಗ್

Lingaraj Badiger

ಶಿಲಾಂಗ್: 'ಟೈಗರ್ ಅಭಿ ಝಿಂದಾ ಹೇ' ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು, ಯಾವ ಟೈಗರ್, ಕಾಗದ ಅಥವಾ ಸರ್ಕಸ್ ನಲ್ಲಿರೋದಾ? ಎಂದು ವ್ಯಂಗ್ಯವಾಡಿದ್ದಾರೆ.

ಇಂದು ರತ್ಲಂ ಜಿಲ್ಲೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಕಮಲ್ ನಾಥ್, "ಯಾವ ಹುಲಿ ಜೀವಂತವಾಗಿದೆ, ಕಾಗದದ ಹುಲಿ ಅಥವಾ ಸರ್ಕಸ್ ನಲ್ಲಿರೋದಾ? ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ಮಾಜಿ ಸಿಎಂ ವಾಗ್ದಾಳಿ ನಡೆಸಿದರು.

"ನಾನು ಮಹಾರಾಜನಲ್ಲ ಅಥವಾ 'ಮಾಮಾ'ನೂ ಅಲ್ಲ ಮತ್ತು ನಾನು ಯಾವತ್ತೂ ಚಾಹ ಸಹ ಮಾರಾಟ ಮಾಡಿಲ್ಲ" ನಾನು ಕಮಲ್ ನಾಥ್ ಅಷ್ಟೆ. ಕೆಲವರು ತಾವು ಟೈಗರ್ ಎಂದು ಹೇಳಿಕೊಳ್ಳುತ್ತಾರೆ. ಆದರೆ ನಾನು ಟೈಗರೂ ಅಲ್ಲ ಮತ್ತು ಕಾಗದದ ಹಲಿಯೂ ಎಂದು ಕಮಲ್ ನಾಥ್ ಹೇಳಿದ್ದಾರೆ.

ಮಾಜಿ ರಾಜಮನೆತನಕ್ಕೆ ಸೇರಿದ ಸಿಂಧಿಯಾ ಅವರನ್ನು ಕೆಲವೊಮ್ಮೆ ರಾಜ್ಯ ರಾಜಕಾರಣದಲ್ಲಿ `ಮಹಾರಾಜ 'ಎಂದು ಕರೆಯಲಾಗುತ್ತದೆ. ಇನ್ನು ಶಿವರಾಜ್ ಸಿಂಗ್ ಚೌಹಾನ್ ಅವರ ಜನಪ್ರಿಯ ಅಡ್ಡಹೆಸರು` ಮಾಮಾ' (ಚಿಕ್ಕಪ್ಪ).

ನಿನ್ನೆಯಷ್ಟೇ ಮಧ್ಯಪ್ರದೇಶ ಸಂಪುಟ ವಿಸ್ತರಣೆಯಾಗಿದ್ದು, ಶಿವರಾಜ್ ಸಿಂಗ್ ಚೌಹಾಣ್ 28 ಸಚಿವರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. 28 ಸಚಿವರ ಪೈಕಿ 14 ಮಂದಿ ಸಿಂಧಿಯಾ ಬೆಂಬಲಿಗರಾಗಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಿಂಧಿಯಾ, ದಿಗ್ವಿಜಯ್ ಸಿಂಗ್ ಅಥವಾ ಕಮಲನಾಥ್ ಅವರಿಂದ ನನಗೆ ಯಾವುದೇ ಪ್ರಮಾಣ ಪತ್ರ ಬೇಕಾಗಿಲ್ಲ, ಕಳೆದ 15 ತಿಂಗಳಲ್ಲಿ ಅವರು ರಾಜ್ಯವನ್ನು ಯಾವು ರೀತಿ ಕೊಳ್ಳೆ ಹೊಡೆದಿದ್ದಾರೆ ಎಂಬ ಬಗ್ಗೆ ಜನರಿಗೆ ತಿಳಿದಿದೆ. ಅವರಿಗೋಸ್ಕರ ಅವರಿಬ್ಬರು ಎಲ್ಲವನ್ನು ಮಾಡಿದ್ದಾರೆ, ಅವರು ನೀಡಿದ್ದ ಭರವಸೆಗಳನ್ನು ಜನ ಪರಿಶೀಲನೆ ಮಾಡಲಿದ್ದಾರೆ,  ನಾನು ಬೇರೆ ಏನು ಮಾತನಾಡುವುದಿಲ್ಲ ಟೈಗರ್ ಅಭಿ ಜಿಂದಾ ಹೈ ಎಂದು ಮಾತ್ರ ಹೇಳುತ್ತೇನೆ ಎಂದಿದ್ದರು.

SCROLL FOR NEXT