ದೇಶ

ಲಡಾಖ್ ಭಾಷಣದಲ್ಲಿ ಚೀನಾ ಹೆಸರು ಹೇಳುವುದಕ್ಕೆ ಹಿಂಜರಿಕೆ ಏಕೆ?: ಪ್ರಧಾನಿ ಮೋದಿಗೆ ಓವೈಸಿ

Srinivas Rao BV

ನವದೆಹಲಿ: ಲಡಾಖ್ ಭಾಷಣದಲ್ಲಿ ಚೀನಾ ಹೆಸರು ಪ್ರಸ್ತಾಪಿಸುವುದಕ್ಕೇಕೆ ಹಿಂಜರಿಕೆ ಎಂದು ಎಐಎಂಐಎಂ ನ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಗಲ್ವಾನ್ ಗಡಿಯಲ್ಲಿ ಚೀನಾ-ಭಾರತದ ನಡುವೆ ಘರ್ಷಣೆ ಉಂಟಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಲೇಹ್ ಗೆ ಭೇಟಿ ನೀಡಿ ಯೋಧರೊಂದಿಗೆ ಮಾತನಾಡಿ, ಗಾಯಗೊಂಡ ಯೋಧರ ಆರೋಗ್ಯ ವಿಚಾರಿಸಿದ್ದರು. ಈ ಬೆನ್ನಲ್ಲೇ ಟ್ವೀಟ್ ಮಾಡಿರುವ ಎಂಐಎಂ ಮುಖಂಡ ಅಸಾದುದ್ದೀನ್ ಓವೈಸಿ, ಪ್ರಧಾನಿಗಳೇ, ನೀವು ಯೋಧರನ್ನು ಭೇಟಿ ಮಾಡಿ, ಗಾಯಗೊಂಡ ಯೋಧರ ಆರೋಗ್ಯ ವಿಚಾರಿಸಿದ್ದು ಒಳ್ಳೆಯದು, ಇದರಿಂದ ಅವರ ನೈತಿಕ ಸ್ಥೈರ್ಯ ಹೆಚ್ಚಲಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ ಹೇಳಿದ್ದ "ಯಾರೂ ಪ್ರವೇಶಿಸಿಲ್ಲ, ನಮ್ಮ ದೇಶದಲ್ಲಿ ಯಾರೂ ಇಲ್ಲ ಎಂಬ ಪ್ರಧಾನಿ ಮೋದಿ ಹೇಳಿಕೆಯ ವಿಡಿಯೋ ಕ್ಲಿಪಿಂಗ್ ನ್ನು ಹಂಚಿಕೊಂಡಿರುವ ಅಸಾದುದ್ದೀನ್ ಓವೈಸಿ ಇದನ್ನು ದೊಡ್ಡ ಐತಿಹಾಸಿಕ ತಪ್ಪು ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋಡಿ "ಮುಟ್ಟಿ ನೋಡಿಕೊಳ್ಳುವಂತಹ ಪ್ರತಿಕ್ರಿಯೆ ನೀಡಿದ್ದೇವೆ" ಎಂದು ಹೇಳುತ್ತಿದ್ದಾರೆ. ಆದರೆ ಯಾರಿಗೆ? ಅವರೇಕೆ ಭಾಷಣಗಳಲ್ಲಿ ಚೀನಾ ಹೆಸರನ್ನು ಉಲ್ಲೇಖಿಸಲು ಹಿಂಜರಿಯುತ್ತಿದ್ದಾರೆ? ಲೇಹ್ ನಲ್ಲಿ ಇಂದಿನ ಘಟನೆ ಶತ್ರು ಒಳನುಗ್ಗಿ ಕೂತಿರುವುದನ್ನು ಸ್ಪಷ್ಟಪಡಿಸುತ್ತಿದೆ ಎಂದು ಮತ್ತೊಂದು ಟ್ವೀಟ್ ನಲ್ಲಿ ಆರೋಪಿಸಿದ್ದಾರೆ.

ಇದೇ ವೇಳೆ ಒಂದು ವೇಳೆ ಪೂರ್ಣ ಪ್ರಮಾಣದ ಯುದ್ಧ ನಡೆದರೆ ಭಾರತ ದೇಶವನ್ನು 12 ದಿನಗಳ ಕಾಲ ಮಾತ್ರ ಮುನ್ನಡೆಸಲು ಸಾಧ್ಯವಿರುವಷ್ಟು ಸಂಪನ್ಮೂಲಗಳಿವೆ ಎಂಬ ಅಂದಾಜು ಚೌಕಿದಾರ್ ಗೆ ಇದೆಯೇ ಎಂದು ಓವೈಸಿ ಕೇಳಿದ್ದಾರೆ.  ಗಲ್ವಾನ್ ಅಗಲೀ, ಹಾಟ್ ಸ್ಪ್ರಿಂಗ್ಸ್ ಆಗಲೀ, ಪ್ಯಾಂಗಾಂಗ್ ತ್ಸೊ ಅಥವಾ ಡೆಸ್ಪಾಂಗ್ ಆಗಲೀ ಅಲ್ಲಿನ ಸ್ಥಿತಿಗಳು ಗಂಭೀರವಾಗಿವೆ. ಆದ ಕಾರಣ ಸಂಸತ್ ಅಧಿವೇಶನವನ್ನು ಶೀಘ್ರವೇ ನಡೆಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿರುವುದಾಗಿ ಓವೈಸಿ ಹೇಳಿದ್ದಾರೆ.

SCROLL FOR NEXT