ದೇಶ

ಆರು ವಾರಗಳಲ್ಲಿ 'ಕೋವ್ಯಾಕ್ಸಿನ್' ಲಸಿಕೆ ಅಸಾಧ್ಯ: ಏಮ್ಸ್ ನಿರ್ದೇಶಕ ಗುಲೇರಿಯಾ

Shilpa D

ನವದೆಹಲಿ: ಕೊರೊನಾ ರೋಗಕ್ಕೆ ಚಿಕಿತ್ಸೆ ಕಲ್ಪಿಸಲು ಅಭಿವೃದ್ದಿಪಡಿಸಲಾಗುತ್ತಿರುವ ಲಸಿಕೆ ಆಗಸ್ಟ್ ೧೫ರೊಳಗೆ ದೇಶದಲ್ಲಿ ಲಭಿಸುವುದು ಅಸಾಧ್ಯ ಎಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ- ಏಮ್ಸ್ ನಿರ್ದೇಶಕ ರಣ್ ದೀಪ್ ಸಿಂಗ್ ಗುಲೇರಿಯಾ ಹೇಳಿದ್ದಾರೆ.

ಅಂತಿಮ ಹಂತದ ಕ್ಲಿನಿಕಲ್ ಟ್ರಯಲ್ನಲ್ಲಿ ಮನುಷ್ಯರ ಮೇಲೆ ಪ್ರಯೋಗಿಸಿ ಅದು ಸುರಕ್ಷಿವೋ, ಅಲ್ಲವೋ ಎಂಬುದನ್ನು ದೃಢಪಡಿಸಿಕೊಳ್ಳಲು ಕೆಲವು ತಿಂಗಳ ಸಮಯ ಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಭಾರತದಲ್ಲಿ ಬಹಳಷ್ಟು ಕಂಪನಿಗಳು ವ್ಯಾಕ್ಸಿನ್ ಅಭಿವೃದ್ದಿ ಪಡಿಸಲು ನಿರಂತರವಾಗಿ ಶ್ರಮಿಸುತ್ತಿವೆ. ಈ ಪೈಕಿ ಭಾರತ್ ಬಯೋಟೆಕ್ ಜೊತೆಗೆ ಸೀರಂ ಇನಿಸ್ಟಿಟ್ಯೂಟ್, ಕ್ಯಾಡಿಲಾ ದಂತಹ ಸಂಸ್ಥೆಗಳು ಪ್ರಯತ್ನ ನಡೆಸುತ್ತಿವೆ. ಲಕ್ಷಾಂತರ ಮಂದಿ ವ್ಯಾಕ್ಸಿನ್ ಬಳಸುವ ಸಾಧ್ಯತೆಯ ಹಿನ್ನಲೆಯಲ್ಲಿ ಪ್ರತಿಕೂಲ ಪರಿಣಾಮ ಇಲ್ಲ ಎಂಬುದನ್ನು ಖಾತರಿ ಪಡಿಸಿಕೊಂಡ ನಂತರವೇ ಲಸಿಕೆ ಬಿಡುಗಡೆ ಮಾಡಬೇಕು. ಜೊತೆಗೆ ರೋಗ ನಿರೋಧ ಶಕ್ತಿ ಹೆಚ್ಚಿಸಲಿದೆಯೇ ಇಲ್ಲವೊ ಎಂಬುದನ್ನು ಖಾತರಿಪಡಿಸಕೊಳ್ಳಬೇಕು ಎಂದರು.

ಇದಕ್ಕೆ ಕೆಲವು ವಾರಗಳ ಸಮಯ ಅಗತ್ಯವಿದೆ. ನಂತರ ವ್ಯಾಕ್ಸಿನ್ ಸುರಕ್ಷತೆ ಕುರಿತು ಪರೀಕ್ಷೆ ನಡೆಸಬೇಕು. ಇವೆಲ್ಲವನ್ನೂ ಪೂರ್ಣಗೊಳಿಸಲು ಸಾಕಷ್ಟು ತಿಂಗಳುಗಳ ಸಮಯ ಬೇಕಾಗುತ್ತದೆ. ಆರು ವಾರಗಳಲ್ಲಿ ಲಸಿಕೆ ಲಭಿಸುವುದು ಸಾಧ್ಯವಿಲ್ಲ ಎಂದು ಗುಲೇರಿಯಾ ಸ್ಪಷ್ಟಪಡಿಸಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ತಗ್ಗಲು ಇನ್ನೂ ಸುಮಾರು ೩,೪ ತಿಂಗಳ ಸಮಯ ಬೇಕಾಗಬಹುದು ಎಂದು ಅವರ ಅಂದಾಜಿಸಿದ್ದಾರೆ. ಎಲ್ಲರಿಗೂ ವ್ಯಾಕ್ಸಿನ್ ಪೂರೈಸಿದ ನಂತರ ವೈರಸ್ ತಗ್ಗಲಿದೆ. ಆಗ ಮಾತ್ರ ಪರಿಸ್ಥಿತಿ ಸಹಜಗೊಳ್ಳಲು ಅವಕಾಶವಾಗುತ್ತದೆ ಎಂದು ಗುಲೇರಿಯಾ ತಿಳಿಸಿದ್ದಾರೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಹಿರಿಯ ವಿಜ್ಞಾನಿ ಟಿ ವಿ ವೆಂಕಟೇಶ್ವರನ್ ಮಾತನಾಡಿ ಕೊರೊನಾ ಶಮನಗೊಳಿಸುವ ಲಸಿಕೆ ೨೦೨೧ರೊಳಗೆ ಲಭ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಈ
ವಿಷಯವನ್ನು ಇಂಡಿಯನ್ ಸೈನ್ಸ್ ವೈರ್ ಪತ್ರಿಕೆ ದೃಢಪಡಿಸಿದೆ.

SCROLL FOR NEXT