ದೇಶ

ಮಂಗಳೂರು ಗುಡ್ಡ ಕುಸಿತ ಪ್ರಕರಣ; ಇಬ್ಬರು ಮಕ್ಕಳ ಸಾವು, 5 ಲಕ್ಷ ರೂ. ಪರಿಹಾರ

Srinivasamurthy VN

ಮಂಗಳೂರು: ಮಂಗಳೂರಿನ ಗುರುಪುರದ ಬಳಿಯ ಗುಡ್ಡ ಕುಸಿತ ಪ್ರಕರಣದಲ್ಲಿ ಸಾವನ್ನಪ್ಪಿದ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ ನೀಡುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರು, 'ಮಂಗಳೂರಿನ ಗುರುಪುರದಲ್ಲಿ ಗುಡ್ಡಕುಸಿದು, ದುರಂತದಲ್ಲಿ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಅಪಾರ ನೋವು ತಂದಿದೆ. ಇಂತಹ ಘಟನೆ ನಡೆಯಬಾರದಿತ್ತು. ಮೃತ ಮಕ್ಕಳ ಆತ್ಮಕ್ಕೆ ಶಾಂತಿ ಕೋರುತ್ತಾ,ಕುಟುಂಬಸ್ಥರಿಗೆ ದುಃಖ ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬಕ್ಕೆ ತಲಾ 5ಲಕ್ಷ ರೂ. ಪರಿಹಾರ ನೀಡಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನು ನಿನ್ನೆ ಮಂಗಳೂರಿನ ಗುರುಪುರದ ಬಳಿಯ ಗುಡ್ಡ ಕುಸಿತ ಸಂಭವಿಸಿದ ಬಳಿಕ ಸುಮಾರು ಐದು ಗಂಟೆಗಳ ಸತತ ಕಾರ್ಯಾಚರಣೆ ನಡೆಸಿ ಮಣ್ಣಿನಡಿ ಸಿಲುಕಿದ್ದ ಇಬ್ಬರು ಮಕ್ಕಳ ಶವವನ್ನು ಎನ್‍ಡಿಆರ್‍ಎಫ್ ಸಿಬ್ಬಂದಿ ಹೊರ ತೆಗೆದಿದ್ದರು. ಮೃತರನ್ನು 16 ವರ್ಷದ ಅಣ್ಣ ಸಫ್ವಾನ್ ಹಾಗೂ 10 ವರ್ಷದ ತಂಗಿ ಸಹಲಾ ಎಂದು ಗುರುತಿಸಲಾಗಿತ್ತು. 

ಮೂಲಗಳ ಪ್ರಕಾರ ಈ ಮನೆಯಲ್ಲಿ ಸುಮಾರು 6 ಜನ ವಾಸವಿದ್ದರು. ಗುಡ್ಡ ಕುಸಿಯುತ್ತಿರುವುದು ತಿಳಿಯುತ್ತಿದ್ದಂತೆ ಮನೆಯವರು ಹೊರಗಡೆ ಓಡಿ ಬಂದಿದ್ದಾರೆ. ಆದರೆ ಇಬ್ಬರು ಮಕ್ಕಳು ಮನೆಯಲ್ಲಿ ಮಲಗಿದ್ದರು. ಹೀಗಾಗಿ ಮನೆಯಲ್ಲೇ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ. 

ರಕ್ಷಣಾ ಕಾರ್ಯ ಸವಾಲಿನಿಂದ ಕೂಡಿತ್ತು. ಹೀಗಾಗಿ ಇಷ್ಟೇ ಸಮಯಕ್ಕೆ ಮುಗಿಯುತ್ತೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಘಟನೆ ನಡೆಯುತ್ತಿದ್ದಂತೆ ಗುಡ್ಡದ ಸುತ್ತ ಮುತ್ತ ಇದ್ದ 15 ಮನೆಯಲ್ಲಿದ್ದ ಜನರನ್ನು ಗಂಜಿ ಕೇಂದ್ರಕ್ಕೆ ರವಾನಿಸಲಾಗಿದೆ. ನಾಳೆ ತಜ್ಞರ ಸಮಿತಿ ತನಿಖೆ ನಡೆಸಿ ವರದಿ ನೀಡಲಿದೆ ಎಂದು ಜಿಲ್ಲಾಧಿಕಾರಿ ಸಿಂಧೂ.ಬಿ.ರೋಪೆಶ್ ತಿಳಿಸಿದ್ದರು. ಆದರೆ ಇದೀಗ ಇಬ್ಬರ ಮಕ್ಕಳ ಶವವನ್ನು ಹೊರಗಡೆ ತೆಗೆಯಲಾಗಿದೆ.

SCROLL FOR NEXT