ದೇಶ

ಪ್ರವಾಸಿಗರಿಂದ ಕೊರೋನಾ ಹರಡುವ ಭೀತಿ: ತಾಜ್ ಮಹಲ್ ವೀಕ್ಷಣೆಗೆ ಸಿಕ್ಕಿಲ್ಲ ಅನುಮತಿ

Raghavendra Adiga

ಆಗ್ರಾ: ತಾಜ್ ಮಹಲ್ ನೋಡಬೇಕೆನ್ನುವ ಪ್ರವಾಸಿಗರ ನಿರೀಕ್ಷೆ ಸಧ್ಯ ಈಡೇರುವಂತೆ ಕಾಣುತ್ತಿಲ್ಲ. ಏಕೆಂದರೆ ಕೊರೋನಾ ಲಾಕ್ ಡೌನ್ ನಂತರ ಸೋಮವಾರದಿಂದ ತಾಜ್ ಮಹಲ್ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಿಕೊಡಲು ಸಾಧ್ಯವಿಲ್ಲ ಎಂದು ಆಗ್ರಾ ನಗರಾಡಳಿತ ಹೇಳಿದೆ. ಸ್ಮಾರಕವನ್ನು ನೋಡಲು ಬರುವ ಪ್ರವಾಸಿಗರಿಂದ ಆಗ್ರಾದಲ್ಲಿ ಹೊಸ ಕೊರೋನಾ ಪ್ರಕರಣಗಳು ಹೆಚ್ಚುವ ಅಪಾಯವಿದ್ದು ಇದಕ್ಕಾಗಿ ತಾಜ್ ವೀಕ್ಷಣೆಗೆ ಪ್ರವಾಸಿಗರ ನಿರ್ಬಂಧವನ್ನು ಮುಂದುವರಿಸಿದೆ.

ಆಗ್ರಾ ಮತ್ತು ಸುತ್ತಮುತ್ತಲಿನ ಸ್ಮಾರಕಗಳ ಮೇಲೆ ಲಾಕ್‌ಡೌನ್ ನಿರ್ಬಂಧಗಳನ್ನು ವಿಸ್ತರಿಸಲು ಸ್ಥಳೀಯ ಅಧಿಕಾರಿಗಳು ಸಲಹೆ ನೀಡಿದ್ದು ಇದನ್ನು ಪರಿಗಣಿಸಿದ ಆಡಳಿತ ಮಾರ್ಚ್ ನಿಂದ ಮುಚ್ಚಲ್ಪಟ್ಟ ಪ್ರವಾಸಿ ತಾಣಗಳ ಸಧ್ಯ ಪುನಃ ತೆರೆಯದಿರಲು ತೀರ್ಮಾನಿಸಿದೆ.  "ಸಾರ್ವಜನಿಕರ ಹಿತದೃಷ್ಟಿಯಿಂದ, ಆಗ್ರಾದಲ್ಲಿ ಸ್ಮಾರಕಗಳನ್ನು ತೆರೆಯುವುದು ಸೂಕ್ತವಲ್ಲ ಎಂದು ನಿರ್ಧರಿಸಲಾಗಿದೆ" ಎಂದು ಜಿಲ್ಲಾಧಿಕಾರಿಗಳು ಹಿಂದಿಯಲ್ಲಿ ಪ್ರಕಟಿಸಿದ ನೋಟೀಸ್ ನಲ್ಲಿ ಉಲ್ಲೇಖಿಸಿದ್ದಾರೆ.

ಭಾರತದಲ್ಲಿ ಕಳೆದ ಮೂರು ತಿಂಗಳಿನಿಂದ ಕೊರೋನಾ ಸೋಂಕು ವೇಗವಾಗಿ ಹಬ್ಬುತ್ತಿದ್ದು ಭಾನುವಾರ ಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿರುವ ವರದಿಯಂತೆ ಒಂದೇ ದಿನ 24,850 ಹೊಸ ಪ್ರಕರಣಗಳು ಮತ್ತು 600 ಕ್ಕೂ ಹೆಚ್ಚು ಸಾವು ಸಂಭವಿಸಿದೆ.ಇದು ಭಾರತದ ಒಟ್ಟಾರೆ ಮೊತ್ತವನ್ನು 673,165 ಪ್ರಕರಣಗಳಿಗೆ ಏರಿಸಿದ್ದು ಈ ಸಂಖ್ಯೆ ಜಾಗತಿಕವಾಗಿ ಮೂರನೇ ಅತಿ ಹೆಚ್ಚು ಕೊರೋನಾ ಪೀಡಿತವಾಗಿರುವ ರಷ್ಯಾದ ಸಂಖ್ಯೆಯನ್ನು ಸಮೀಪಿಸಿದೆ.

ಅಂತರರಾಷ್ಟ್ರೀಯ ವಿಮಾನಯಾನಗಳು ಸ್ಥಗಿತಗೊಂಡಿದ್ದರೂ, ದೇಶೀಯ ವಾಯುಯಾನ ಪ್ರಾರಂಭವಾಗಿದೆ. ಸಂದರ್ಶಕರು ಕೆಲವು ಜನಪ್ರಿಯ ತಾಣಗಳಿಗೆ ಭೇಟಿಕೊಡಲು ಪ್ರಾರಂಭಿಸಿದ್ದಾರೆ.ಕಂಟೈನ್‌ಮೆಂಟ್ ವಲಯಗಳು, ವೈರಸ್‌ನಿಂದ ಹೆಚ್ಚು ಪ್ರಭಾವಿತವೆಂದು ಗುರುತಿಸಲ್ಪಟ್ಟ ಪ್ರದೇಶಗಳು ಕಟ್ಟುನಿಟ್ಟಾದ ಲಾಕ್‌ಡೌನ್ ಅಡಿಯಲ್ಲಿ ಉಳಿದಿವೆ, ನಿರ್ಬಂಧಿತ ಪ್ರವೇಶ ಮತ್ತು ಅಗತ್ಯ ಸರಕುಗಳು ಮತ್ತು ಸೇವೆಗಳ  ಸಂಚಾರವನ್ನಷ್ಟೇ ಅನುಮತಿಸಿದೆ. 

"ನಾವು ಪ್ರವಾಸಿಗರ ಭೇಟಿಯನ್ನು ನಿರೀಕ್ಷಿಸುವುದಿಲ್ಲ. ಏಕೆಂದರೆ ತಾಜ್ ಸುತ್ತಮುತ್ತಲಿನ ಅಂಗಡಿಗಳು ಮತ್ತು ಹೋಟೆಲ್‌ಗಳು ಸೇರಿದಂತೆ ಕ್ಲಸ್ಟರ್‌ಗಳು ಮುಚ್ಚಲ್ಪಟ್ಟಿವೆ" ಎಂದು ಸ್ಥಳೀಯ ಜಿಲ್ಲಾಡಳಿತಕ್ಕೆ ಸೇರಿದ್ದ ಅಧಿಕಾರಿ ಮಾಹಿತಿ ನೀಡಿದ್ದಾರೆ. 

SCROLL FOR NEXT