ದೇಶ

ಭಾರತೀಯ ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ: ಕೇಂದ್ರಕ್ಕೆ ಇನ್ನೂ 1 ತಿಂಗಳ ಸಮಯ ನೀಡಿದ ಸುಪ್ರೀಂ ಕೋರ್ಟ್

Sumana Upadhyaya

ನವದೆಹಲಿ: ಭಾರತೀಯ ಸೇನೆಯಲ್ಲಿ ಸೇವೆಯಲ್ಲಿರುವ ಎಲ್ಲಾ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ಸ್ಥಾಪಿಸಬೇಕು, ಪುರುಷರಂತೆಯೇ ಮಹಿಳೆಯರಿಗೆ ಸಹ ಸ್ಥಾನಮಾನವನ್ನು ನೀಡಬೇಕೆಂದು ಹೊರಡಿಸಿದ್ದ ಆದೇಶವನ್ನು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮತ್ತೆ ಒಂದು ತಿಂಗಳ ಕಾಲಾವಕಾಶ ನೀಡಿದೆ.

ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಇಂದು ಕೇಂದ್ರ ಸರ್ಕಾರ ತಾನು ಕಳೆದ ಫೆಬ್ರವರಿ 17ರಂದು ನೀಡಿದ್ದ ಆದೇಶಗಳನ್ನು ಯಥಾಪ್ರಕಾರವಾಗಿ ಜಾರಿಗೆ ತರಬೇಕೆಂದು ಹೇಳಿದೆ.

ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶವನ್ನು ಜಾರಿಗೆ ತರಲು ಇನ್ನೂ 6 ತಿಂಗಳ ಕಾಲಾವಕಾಶ ನೀಡಬೇಕೆಂದು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿತ್ತು. ಇಂದು ವಿಚಾರಣೆ ಕೈಗೆತ್ತಿಗೊಂಡ ನ್ಯಾಯಮೂರ್ತಿಗಳು ಒಂದು ತಿಂಗಳ ಕಾಲಾವಕಾಶ ವಿಸ್ತರಣೆ ಮಾಡಿದ್ದಾರೆ.

ಕಳೆದ ಫೆಬ್ರವರಿ 17ರಂದು ಮಹತ್ವದ ಆದೇಶ ಹೊರಡಿಸಿದ್ದ ಸುಪ್ರೀಂ ಕೋರ್ಟ್, ಭಾರತೀಯ ಸೇನೆಯಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗವನ್ನು ಸ್ಥಾಪಿಸುವುದಲ್ಲದೆ ಪುರುಷ ಅಧಿಕಾರಿಗಳಿಗೆ ಸಮನಾಗಿ ಕಮಾಂಡ್ ಹುದ್ದೆಯನ್ನು ನೀಡಬೇಕು, ಅವರ ಮೇಲೆ ಲಿಂಗ ತಾರತಮ್ಯ ತೋರಬಾರದು ಎಂದು ಹೇಳಿತ್ತು.

ಇನ್ನು ಮೂರು ತಿಂಗಳೊಳಗೆ ಅಲ್ಪ ಸೇವಾ ಆಯೋಗದಲ್ಲಿ 14 ವರ್ಷಗಳಿಂದ ಸೇವೆಯಲ್ಲಿರುವ ಎಲ್ಲಾ ಮಹಿಳಾ ಅಧಿಕಾರಿಗಳನ್ನು ಶಾಶ್ವತ ಆಯೋಗದ ಅಧಿಕಾರಿಗಳೆಂದು ಪರಿಗಣಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿತ್ತು.

SCROLL FOR NEXT