ದೇಶ

ಕೊರೋನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿ, ಸೇವೆ ಒದಗಿಸಿ: ವೈದ್ಯರಿಗೆ ವೈದ್ಯಕೀಯ ಪರಿಷತ್ ಮನವಿ

Srinivas Rao BV

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ನಡುವೆ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ ವೈದ್ಯರ ಕೊರತೆ ಎದುರಾಗಿದ್ದು, ಪರಿಸ್ಥಿತಿ ನಿಭಾಯಿಸಲು ಸಹಕಾರ ನೀಡಬೇಕೆಂದು ರಾಜ್ಯದ ವೈದ್ಯಕೀಯ ಪರಿಷತ್ ನಲ್ಲಿ ನೋಂದಣಿ ಮಾಡಿಕೊಂಡಿರುವವರಿಗೆ ಸರ್ಕಾರ ಮನವಿ ಮಾಡಿದೆ. 

ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶನದ ಪ್ರಕಾರವಾಗಿ ರಾಜ್ಯ ವೈದ್ಯಕೀಯ ಪರಿಷತ್ ತನ್ನಲ್ಲಿ ನೋಂದಣಿ ಮಾಡಿಕೊಂಡಿರುವ ವೈದ್ಯರಿಗೆ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಸಹಾಯ ಹಸ್ತ ಚಾಚಬೇಕೆಂದು ಮನವಿ ಮಾಡಿದೆ.

"ನಮ್ಮ ರಾಜ್ಯದಲ್ಲಿ ಕೊರೋನಾ ಪ್ರಕರಣ ಏರಿಕೆಯಾಗುತ್ತಿದೆ. ಈ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಿಮ್ಮ ಸೇವೆ ಅತ್ಯಗತ್ಯವಾಗಿದೆ ಎಂದು ವೈದ್ಯ ಸಮೂಹಕ್ಕೆ ಕೆಎಂಸಿ ಅಧ್ಯಕ್ಷ ಡಾ.ಹೆಚ್ ವೀರಭದ್ರಪ್ಪ ಕರೆ ನೀಡಿದ್ದಾರೆ.

ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ಸೇವೆ ನೀಡಲು ಮುಂದಾಗುವ ವೈದ್ಯರುಗಳು ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಯಾವ ವೈದ್ಯರುಗಳ ಬಳಿ ಸಮಯವಿದೆಯೋ ಅಂತಹವರು, ಬೇರೆಡೆ ಸೇವೆ ಸಲ್ಲಿಸುತ್ತಿಲ್ಲದ ವೈದ್ಯರುಗಳು ಕೋವಿಡ್-19 ರೋಗಿಗಳ ಚಿಕಿತ್ಸೆಗೆ  ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ ಎಂದು ಡಾ.ವೀರಭದ್ರಪ್ಪ ಹೇಳಿದ್ದಾರೆ.    

ಸ್ವಯಂ ಸೇವಕ ವೈದ್ಯರಿಗೆ ಯಾವ ಸಮಯ ಸೂಕ್ತವಿದೆಯೋ ಆ ಸಮಯದಲ್ಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ನೀಡಲಿ, 6 ಗಂಟೆಗಳ ಕಾಲ ಕಾರ್ಯನಿರ್ವಹಿಸಬೇಕೆಂದೇನೂ ಇಲ್ಲ. ದಿನಕ್ಕೆ 2- ಗಂಟೆಗಳು ಕಾರ್ಯನಿರ್ವಹಿಸಿದರೂ ಸಾಕು, ಎಲ್ಲಾ ವೈದ್ಯರಿಗೆ ಐಸಿಯು ನಿರ್ವಹಣೆ ಮಾಡುವುದಕ್ಕೆ ಸಾಧ್ಯವಿಲ್ಲ. ಆದರೆ ಅಗತ್ಯ ಸಂದರ್ಭಗಳಲ್ಲಿ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸುವ ವೈದ್ಯರುಗಳ ಅಗತ್ಯವಿದೆ ಎಂದು ಡಾ.ವೀರಭದ್ರಪ್ಪ ಹೇಳಿದ್ದಾರೆ.
 

SCROLL FOR NEXT