ದೇಶ

ಕೋವಿಡ್-19 ಬಗ್ಗೆ ಪ್ರಸಾರವಾಗುತ್ತಿರುವ ತಪ್ಪು ಮಾಹಿತಿ ಗುರುತಿಸಿದ ಕೇರಳ ಮೂಲದ ವೈದ್ಯೆ: ವಿಶ್ವಸಂಸ್ಥೆಯಿಂದ ಪ್ರಶಂಸೆ

Sumana Upadhyaya

ಕೋಝಿಕ್ಕೋಡು: ವಿಕಿಪೀಡಿಯಾದಲ್ಲಿ ಕೋವಿಡ್-19 ಬಗ್ಗೆ ಬಂದ ತಪ್ಪು ಮಾಹಿತಿಯನ್ನು ತಿಳಿಸಿದ್ದಕ್ಕೆ ಕೇರಳದ ಕೋಝಿಕ್ಕೋಡು ಮೂಲದ ಡಾ ನೇತಾ ಹುಸೇನ್ ಅವರನ್ನು ವಿಶ್ವಸಂಸ್ಥೆ ಪ್ರಶಂಸಿಸಿದೆ.

ಸ್ವೀಡನ್ ನಲ್ಲಿರುವ ಕೇರಳ ಮೂಲದ ನರ ವಿಜ್ಞಾನಿ ಮತ್ತು ಸಂಶೋಧಕಿ ಸುಳ್ಳು ಸುದ್ದಿ ಹಬ್ಬುತ್ತಿರುವುದರ ವಿರುದ್ಧ ಮಾಡುತ್ತಿರುವ ಕೆಲಸಕ್ಕೆ ವ್ಯಾಪಕ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ.

ವಿಕಿಪೀಡಿಯಾದಲ್ಲಿ ಸಂಕಲನ ಮಾಡುವ ಕೆಲಸದಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಅನುಭವ ಹೊಂದಿರುವ ನೇತಾ ಔಷಧಿ, ವೈದ್ಯಕೀಯ ವಿಷಯದಲ್ಲಿ ಜನರಿಗೆ ನಿಖರ ಮತ್ತು ಸತ್ಯ ಮಾಹಿತಿ ಮಾತ್ರ ತಲುಪಬೇಕು, ಕೋವಿಡ್-19 ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಸುಳ್ಳು ಮಾಹಿತಿ ಹರಡುತ್ತಿದೆ, ಅದರಲ್ಲೂ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಇದು ವ್ಯಾಪಕವಾಗಿದೆ ಎಂದು ಹೇಳುತ್ತಾರೆ.

ಬೆಳ್ಳುಳ್ಳಿ, ಶುಂಠಿ, ವಿಟಮಿನ್ ಸಿ ಮತ್ತು ಸಿಟ್ರಸ್ ಇರುವ ಹಣ್ಣುಗಳನ್ನು ಸೇವಿಸಿದರೆ ಕೊರೋನಾ ತಡೆಗಟ್ಟಬಹುದು ಎಂಬ ಮಾಹಿತಿ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಹರಿದಾಡುತ್ತಿದೆ. ಅಧಿಕ ಉಷ್ಣತೆ ಇರುವಲ್ಲಿ ಕೊರೋನಾ ಸೋಂಕು ಹರಡಲು ಸಾಧ್ಯವಿಲ್ಲ ಎಂಬ ಮತ್ತೊಂದು ಮಾಹಿತಿ ಹಬ್ಬುತ್ತಿದೆ. ಈ ಮಾಹಿತಿಗಳು ಸುಳ್ಳಾಗಿದ್ದು ಕೋವಿಡ್-19 ಬಗ್ಗೆ ನಾನು ವಿಕಿಪೀಡಿಯಾದಲ್ಲಿ ಸುಮಾರು 30 ಲೇಖನಗಳನ್ನು ಬರೆದಿದ್ದೇನೆ ಎನ್ನುತ್ತಾರೆ ನೇತಾ.

ಅವರು ಹೇಳುವ ಪ್ರಕಾರ ಮಲೇರಿಯಾಕ್ಕೆ ಕೊಡುವ ಔಷಧಿ ಹೈಡ್ರೊಕ್ಸಿಕ್ಲೊರೊಕ್ವಿನ್ ಕೋವಿಡ್-19 ಸೋಂಕು ನಿವಾರಣೆಗೆ ಅಷ್ಟು ಉತ್ತಮವಲ್ಲ, ಆದರೆ ಅದು ಉತ್ತಮ ಎಂದು ಜನರು ನಂಬುತ್ತಿದ್ದಾರೆ ಎನ್ನುತ್ತಾರೆ.

ಆಂಧ್ರಪ್ರದೇಶದ ಕುಟುಂಬವೊಂದರ ನಾಲ್ವರು ಡಾಟುರಾ ಸಸ್ಯದ ವಿಷಕಾರಿ ಬೀಜಗಳಿಂದ ಮಾಡಿದ ರಸವನ್ನು ಕೋವಿಡ್-19 ಗೆ ಚಿಕಿತ್ಸೆಗೆ ಉತ್ತಮ ಎಂದು ನಂಬಿ ಸೇವಿಸಿ ಕೊನೆಗೆ ಆಸ್ಪತ್ರೆ ಸೇರಿದರು ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.
ವಾಟ್ಸಾಪ್, ಫೇಸ್ ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಸರಿಯಾದ, ನಿಖರ ಮಾಹಿತಿ ಹಂಚಿಕೊಳ್ಳಿ ಎಂದು ಜನರಲ್ಲಿ ಅವರು ಮನವಿ ಮಾಡಿಕೊಳ್ಳುತ್ತಾರೆ.

SCROLL FOR NEXT