ದೇಶ

ತಾಯಿಗೆ ಕೋವಿಡ್-19 ನೆಗೆಟಿವ್, ನವಜಾತ ಶಿಶುವಿಗೆ ಸೋಂಕು ದೃಢ!: ಭ್ರೂಣದಲ್ಲೇ ಸೋಂಕು ತಗುಲಿದ ವಿಶ್ವದ ಮೊದಲ ಪ್ರಕರಣ!

Srinivas Rao BV

ದೆಹಲಿ: ತಾಯಿಗೆ ಕೋವಿಡ್-19 ಸೋಂಕು ಪರೀಕ್ಷೆ ನೆಗೆಟೀವ್ ಬಂದಿದ್ದರೂ ನವಜಾತ ಶಿಶುವಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಘಟನೆ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ವರದಿಯಾಗಿದೆ. 

ಮಗುವಿನ ತಾಯಿಗೆ ಹೆರಿಗೆಗೂ ಮುನ್ನ ಕೋವಿಡ್-19 ಪರೀಕ್ಷೆ ನಡೆಸಲಾಗಿತ್ತು. ಈ ವರದಿಯಲ್ಲಿ ಆಕೆಗೆ ಕೋವಿಡ್-19 ನೆಗೆಟೀವ್ ಬಂದಿತ್ತು. ಆದರೆ ಹೆರಿಗೆಯಾದ 6 ಗಂಟೆಗಳ ನಂತರ ಮಗುವಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿದ್ದು ಸೋಂಕು ದೃಢಪಟ್ಟಿದೆ. 

ವೈದ್ಯರು ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದು ಭ್ರೂಣದಲ್ಲಿ ಕೋವಿಡ್-19 ಸೋಂಕು ತಗುಲಿರುವ ವಿಶ್ವದ ಮೊದಲ ಪ್ರಕರಣ ಇದು ಎಂದು ಹೇಳಿದ್ದಾರೆ. ಕೋವಿಡ್-19 ಸೋಂಕು ತಗುಲಿದ್ದರೂ ನವಜಾತ ಶಿಶುವಿಗೆ ರೋಗಲಕ್ಷಣಗಳು ಕಂಡಿಬಂದಿಲ್ಲ. ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಮಗುವಿನ ತಾಯಿಗೆ ಜೂ.11 ರಂದು ಕೋವಿಡ್-19 ಸೋಂಕು ಪರೀಕ್ಷೆ ನಡೆಸಿದ್ದಾಗ ಸೋಂಕು ದೃಢಪಟ್ಟಿತ್ತು. ಜೂ.27 ರಂದು ಎರಡನೇ ಬಾರಿಗೂ ಸೋಂಕು ದೃಢಪಟ್ಟಿತ್ತು. ಆದರೆ ಜು.7 ರಂದು ಆಕೆಗೆ ಕೊರೋನಾ ಸೋಂಕು ಪರೀಕ್ಷೆ ವರದಿ ನೆಗೆಟೀವ್ ಬಂದಿದ್ದು ಜು.08 ರಂದು ಹೆರಿಗೆಯಾಗಿತ್ತು, ಮಗುವಿಗೆ 48 ಗಂಟೆಗಳ ನಂತರ ಮತ್ತೊಂದು ಬಾರಿ ಟೆಸ್ಟ್ ಮಾಡಲಾಗುವುದು ಎಂದು ಆಸ್ಪತ್ರೆಯ ವೈದ್ಯರಾದ ಡಾ. ರಾಹುಲ್ ಚೌಧರಿ ತಿಳಿಸಿದ್ದಾರೆ. 

SCROLL FOR NEXT