ದೇಶ

ಕೊರೋನಾ ಅನಿರೀಕ್ಷಿತ; ಸಾವು, ಸೋಂಕು ಕಡಿಮೆಯಿದೆ ಎಂದು ನಿರ್ಲಕ್ಷ್ಯ ಬೇಡ: ಜನತೆಗೆ ಸಿಎಂ ಕೇಜ್ರಿವಾಲ್

Manjula VN

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಾವು ಹಾಗೂ ಸೋಂಕಿನ ಸಂಖ್ಯೆ ಕಡಿಮೆಯಿದೆ ಎಂದು ಸಮಾಧಾನಪಟ್ಟುಕೊಳ್ಳದಿರಿ. ಕೊರೋನಾ ಅನಿರೀಕ್ಷಿತವಾಗಿದ್ದು, ಯಾವುದೇ ಸಮಯದಲ್ಲಿ ಬೇಕಾದರೂ ಸೋಂಕಿನ, ಸಾವಿನ ಸಂಖ್ಯೆ ಏರಿಕೆಯಾಗಬಹುದು ಎಂದು ಜನತೆಗೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಎಚ್ಚರಿಕೆ ನೀಡಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಪ್ರಸ್ತುತ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಇಳಿಕೆಯಾಗಿದೆ. ಆದರೆ, ಇಷ್ಟಕ್ಕೇ ಜನರು ಸಮಾಧಾನ ಪಟ್ಟುಕೊಳ್ಳಬಾರದು. ಮತ್ತೆ ಯಾವಾಗ ಕೊರೋನಾ ಸೋಂಕು ಹರಡುತ್ತದೆ ಎಂಬುದು ಯಾರೂ ಊಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಜನರ ಸಹಕಾರದಿಂದಾಗಿ ಸೋಂಕಿನ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಇಳಿಕೆಯಾಗಲು ಸಹಾಯಕವಾಗಿದೆ. ವೈರಸ್ ಮಟ್ಟಹಾಕಲು ನಮ್ಮ ಒಬ್ಬರಿಂದ ಸಾಧ್ಯಾವಾಗುತ್ತಿರಲಿಲ್ಲ ಎಂಬುದು ಇದೀಗ ನಮಗೂ ತಿಳಿದಿದೆ. ಪ್ರತೀಯೊಬ್ಬರೂ ಒಗ್ಗೂಡುವಂತೆ ಮಾಡಿದೆವು. ಎಲ್ಲರ ಸಹಕಾರದಿಂದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದೇವೆಂದು ತಿಳಿಸಿದ್ದಾರೆ. 

ಹೋಮ್ ಐಸೋಲೇಷನ್ ಕಾರ್ಯಕ್ರಮದಿಂದ ದೆಹಲಿಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಹೋಂ ಐಸೋಲೇಷನ್ ನಿಂದ ಕಳೆದ 12 ದಿನಗಳಿಂದ ಯಾವುದೇ ಸಾವುಗಳೂ ಸಂಭವಿಸಿಲ್ಲ. ಪರೀಕ್ಷಾ ಸಾಮರ್ಥ್ಯವನ್ನೂ ನಾವೂ ಹೆಚ್ಚಿಸಿದ್ದೇವೆ. ದೆಹಲಿ ಜನತೆಗಾಗಿ ನಾವು ಹೋಂ ಐಸೋಲೇಷನ್ ಕಾರ್ಯಕ್ರಮವನ್ನು ಆರಂಭಿಸಿದ್ದೆವು. ಇದರಂತೆ ಜನರಿಗೆ ಮನೆಯಲ್ಲಿಯೇ ಆಕ್ಸಿಮೀಟರ್ ಗಳನ್ನು ನೀಡಿದ್ದೆವು. ಸಾವು, ಸೋಂಕು ಕಡಿಮೆಯಿದೆ ಎಂದು ಜನರು ನಿರ್ಲಕ್ಷ್ಯ ತೋರದೆ, ಮಾಸ್ಕ್ ಧರಿಸುವುದು, ಆಗಾಗ ಕೈಗಳನ್ನು ಸ್ವಚ್ಛಗೊಳಿಸುವ ಕಾರ್ಯಗಳನ್ನು ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

SCROLL FOR NEXT