ದೇಶ

ಎರಡು ಭಾರತೀಯ ಕಂಪೆನಿಗಳಿಂದ ಕೊರೋನಾ ಔಷಧ ಮನುಷ್ಯರ ಮೇಲೆ ಪ್ರಯೋಗ: ಐಸಿಎಂಆರ್

Srinivasamurthy VN

ನವದೆಹಲಿ: ಎರಡು ಭಾರತೀಯ ಕಂಪನಿಗಳು ದೇಶದ ವಿವಿಧ ಸ್ಥಳಗಳಲ್ಲಿ ಮನುಷ್ಯರ ಮೇಲೆ ಕೊರೊನಾವೈರಸ್ ಔಷಧವನ್ನು ಪ್ರಯೋಗ ನಡೆಸುತ್ತಿದ್ದು, ಶೀಘ್ರದಲ್ಲೇ ಒಳ್ಳೆಯ ಸುದ್ದಿ ನಿರೀಕ್ಷಿಸಲಾಗಿದೆ.

ಕೋವಿಡ್ -19 ಔಷಧ ಅಭಿವೃದ್ಧಿಪಡಿಸುವ ಹಾದಿಯಲ್ಲಿ ಭಾರತವನ್ನು "ವಿಶ್ವದ ಔಷಧಾಲಯ" ಎಂದು ಬಣ್ಣಿಸಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ ಅವರು, ಎರಡು ಭಾರತೀಯ ಔಷಧ ತಯಾರಕ ಕಂಪನಿಗಳಾದ ಜೈಡಸ್‍ ಕ್ಯಾಡಿಲಾ ಮತ್ತು ಭಾರತ್ ಬಯೋಟೆಕ್ ಇಂಟರ್ ನ್ಯಾಷನಲ್‍ ಲಿಮಿಟೆಡ್ ತಲಾ 1,000 ಜನರ ಗುಂಪುಗಳ ಮೇಲೆ ವಿವಿಧ ಸ್ಥಳಗಳಲ್ಲಿ ಕೊರೋನಾ ಔಷಧ ಪರೀಕ್ಷಿಸುತ್ತಿವೆ ಎಂದು ಹೇಳಿದ್ದಾರೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಂಪನಿಗಳು ಈಗಾಗಲೇ ಇಲಿಗಳು ಮತ್ತು ಇತರ ಜೀವಿಗಳ ಮೇಲೆ ಔಷಧದ ಪರಿಣಾಮ ಮತ್ತು ಇತರ ಅಡ್ಡಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿ ಇದರ ಸಂಶೋಧನೆಗಳನ್ನು ಭಾರತೀಯ ಔಷಧ ಮಹಾ ನಿಯಂತ್ರಕರ ಕಚೇರಿಗೆ (ಡಿಜಿಸಿಐ) ಗೆ ಸಲ್ಲಿಸಿವೆ. ಮುಂದಿನ ಹಂತದಲ್ಲಿ ಮಾನವರ ಮೇಲೆ ಈ ಔಷಧದ ಪ್ರಯೋಗ ಮಾಡಲಾಗುತ್ತದೆ. ಇದಕ್ಕಾಗಿ ದೇಶಾದ್ಯಂತ ಸುಮಾರು 1 ಸಾವಿರ ಸೋಂಕಿತರ ಮೇಲೆ ಲಸಿಕೆ ಪ್ರಯೋಗ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. 

ಕೊರೋನಾ ವೈರಸ್ ಗೆ ಔಷಧಿ ಕಂಡುಹಿಡಿಯುವುದು ನಮ್ಮ ನೈತಿಕ ಹೊಣೆ. ಆದಷ್ಟು ಬೇಗ ಲಸಿಕೆ ಕಂಡು ಹಿಡಿಯುವ ಅನಿವಾರ್ಯತೆ ಇದೆ. ಜಗತ್ತಿನಾಧ್ಯಂತ ಸುಮಾರು ಅರ್ಧ ಮಿಲಿಯನ್ ಮಂದಿ ಈ ಮಾರಕ ವೈರಸ್ ನಿಂದ ಬಳಲುತ್ತಿದ್ದಾರೆ. ಹೀಗಾಗಿ ಲಸಿಕೆ ಕಂಡುಹಿಡಿಯುವ ಅನಿವಾರ್ಯತೆ ಹೆಚ್ಚಾಗಿದೆ ಎಂದು ಹೇಳಿದರು. ಅಂತೆಯೇ ಪ್ರಮುಖ ಸಂಗತಿಯೆಂದರೆ, ಆಫ್ರಿಕಾ, ಯುರೋಪ್ ಅಥವಾ ಆಗ್ನೇಯ ಏಷ್ಯಾ ದೇಶಗಳಿಗೆ ಸರಬರಾಜು ಮಾಡಲ್ಪಟ್ಟ ಒಟ್ಟಾರೆ ಲಸಿಕೆಗಳ ಪೈಕಿ ಶೇ.60 ರಷ್ಟು ಲಸಿಕೆಗಳು ಭಾರತೀಯ ಮೂಲದ್ದು ಎಂದು ಹೇಳಿದರು.

SCROLL FOR NEXT