ದೇಶ

ಕೋವಿಡ್-19: ದೇಶಾದ್ಯಂತ 24 ಗಂಟೆಗಳಲ್ಲಿ 28,498 ಮಂದಿಯಲ್ಲಿ ವೈರಸ್ ಪತ್ತೆ, 9 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ

Manjula VN

ನವದೆಹಲಿ: ದೇಶದಲ್ಲಿ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಬರೋಬ್ಬರಿ 28,498 ಮಂದಿಯಲ್ಲಿ ಹೊಸದಾಗಿ ವೈರಸ್ ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 9 ಲಕ್ಷ ಗಡಿದಾಟಿದಂತಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ಮಾಹಿತಿ ನೀಡಿದೆ. 

ಕಳೆದ ಕೇವಲ 5 ದಿನಗಳಲ್ಲಿ 1.13 ಲಕ್ಷ ಹೊಸ ಪ್ರಕರಣ ಬೆಳಕಿಗೆ ಬಂದಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟಾರೆ 9,06,752ಕ್ಕೆ ಸೋಂಕಿತರ ಸಂಖ್ಯೆ ತಲುಪಿದೆ. 

ಇನ್ನು ಮಂಗಳವಾರ ದೇಶದಾದ್ಯಂತ 553 ಜನರು ಸಾವನ್ನಪ್ಪುವುದರೊಂದಿಗೆ ಈ ವರೆಗೆ ಬಲಿಯಾದವರ ಸಂಖ್ಯೆ 23,727ಕ್ಕೆ ತಲುಪಿದೆ. ಇದರ ನಡುವೆಯೇ 9,06,752 ಮಂದಿ ಸೋಂಕಿತರ ಪೈಕಿ 5,71,460 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇನ್ನೂ ದೇಶದಲ್ಲಿ 3,11,565 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. 

ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ ಮತ್ತೆ 6497 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,60,924ಕ್ಕೆ ಏರಿಕೆಯಾಗಿದೆ. ಇನ್ನು ಒಂದೇ ದಿನ 193 ಮಂದಿ ಬಲಿಯಾಗಿದ್ದು, ಈ ವರೆಗೆ ಈ ಸೋಂಕಿಗೆ ಒಟ್ಟು 10,482 ಮಂದಿ ಸಾವನ್ನಪ್ಪಿದ್ದಾರೆ. 

ಉಳಿದಂತೆ ತಮಿಳುನಾಡಿನಲ್ಲಿ 4328, ಕರ್ನಾಟಕದಲ್ಲಿ 2738, ಆಂಧ್ರಪ್ರದೇಶದಲ್ಲಿ 1935, ಉತ್ತರಪ್ರದೇಶದಲ್ಲಿ 1654, ಪಶ್ಚಿಮ ಬಂಗಾಳದಲ್ಲಿ 1435 ಹಾಗೂ ದೆಹಲಿಯಲ್ಲಿ 1246 ಸೋಮವಾರ ದಾಖಲಾದ ಗರಿಷ್ಠ ಪ್ರಮಾಣದ ಸೋಂಕು ಪ್ರಕರಣಗಳಾಗಿವೆ. ಮತ್ತೊಂದೆಡೆ ಕರ್ನಾಟಕದಲ್ಲಿ 73, ತಮಿಳುನಾಡಿನಲ್ಲಿ 66, ದೆಹಲಿಯಲ್ಲಿ 40, ಆಂಧ್ರಪ್ರದೇಶದಲ್ಲಿ 37 ಮಂದಿ ಸಾವನ್ನಪ್ಪಿದ್ದಾರೆ. 

SCROLL FOR NEXT