ದೇಶ

ಸೋಂಕಿತ ವ್ಯಕ್ತಿಯ ಮೃತದೇಹ ಸಾಗಿಸಲು ಪುರಸಭೆ ಸಿಬ್ಬಂದಿ ನಕಾರ: ಟ್ರ್ಯಾಕ್ಟರ್ ಓಡಿಸಿ ಸ್ಮಶಾನಕ್ಕೆ ಸಾಗಿಸಿದ ವೈದ್ಯ!

Manjula VN

ತೆಲಂಗಾಣ: ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಮೃತದೇಹ ಸಾಗಿಸಲು ಪುರಸಭೆ ಸಿಬ್ಬಂದಿಗಳು ನಿರಾಕರಿಸಿದ ಹಿನ್ನೆಲೆಯಲ್ಲಿ ಸರ್ಕಾರಿ ವೈದ್ಯರೊಬ್ಬರು, ಸ್ಟೆತಾಸ್ಕೋಪ್ ಬದಿಗಿಟ್ಟು ಟ್ರ್ಯಾಕ್ಟರ್ ಓಡಿಸಿ ಮೃತದೇಹವನ್ನು ಸ್ಮಶಾನಕ್ಕೆ ಸಾಗಿಸಿದ ಅಪರೂಪದ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ. 

ತೆಲಂಗಾಣ ರಾಜ್ಯದ ಪೆದ್ದಪಲ್ಲಿ ಜಿಲ್ಲೆಯಲ್ಲಿ ಭಾನುವಾರ ಘಟನೆ ನಡೆದಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಸ್ಮಶಾನಕ್ಕೆ ಮೃತದೇಹವನ್ನು ಸಾಗಿಸಿದ ವೈದ್ಯ ಪೆಂಡ್ಯಾಲ ಶ್ರೀರಾಮ್ ಜಿಲ್ಲಾ ಸರ್ವೇಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. 

ಕೊರೋನಾಗೆ ಬಲಿಯಾದ ವ್ಯಕ್ತಿ ಮೃತದೇಹ ಸಾಗಿಸಲು ಟ್ರ್ಯಾಕ್ಟರ್ವೊಂದನ್ನು ತರಿಸಲಾಗಿತ್ತು. ಆದರೆ, ಚಾಲಕ ಮೃತದೇಹ ಸಾಗಿಸಲು ಹಿಂದೇಟು ಹಾಕಿದ್ದಾನೆ. ಬಳಿಕ ಆಸ್ಪತ್ರೆಯ ಸಿಬ್ಬಂದಿಗಳು ಪರಿಸ್ಥಿತಿ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಪಿಪಿಇ ಕಿಟ್ ಧರಿಸಿ ಬಂದ ವೈದ್ಯ ಖುದ್ದು ಟ್ರ್ಯಾಕ್ಟರ್ ಚಲಾಯಿಸಿ ಮೃತದೇಹವನ್ನು ಸ್ಮಶಾನಕ್ಕೆ ಸಾಗಿಸಿದ್ದಾರೆ. 

ಜೂ.10ರಂದು ಕೊರೋನಾ ಪಾಸಿಟಿವ್ ಬಂದಿದ್ದ 45 ವರ್ಷದ ವ್ಯಕ್ತಿ ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಇದು ಆ ಜಿಲ್ಲಾಸ್ಪತ್ರೆಯಲ್ಲಿ ಮೊದಲ ಕೊರೋನಾ ಸಾವಿನ ಪ್ರಕರಣವಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ. 

ವೈದ್ಯರ ಈ ಕಾರ್ಯಕ್ಕೆ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

ಡಾ.ಪೆಂಡ್ಯಾಲ ಶ್ರೀರಾಮ್ ಅವರ ಈ ಕಾರ್ಯವನ್ನು ಶ್ಲಾಂಘಿಸುತ್ತೇನೆ. ಇವರ ಈ ಅತ್ಯುತ್ತಮ ಕಾರ್ಯ ಇತರರಿಗೂ ಪ್ರೇರಣೆ ನೀಡಲಿದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ. 

ಪೆಂಡ್ಯಾಲ ಶ್ರೀರಾಮ್ ಅವರು ನಿಸ್ವಾರ್ಥ ಸೇವೆಯು ಭಾರತ ತತ್ವಶಾಸ್ತ್ರಗಳಾದ ಹಂಚಿಕೊಳ್ಳುವುದು ಹಾಗೂ ಕಾಳಜಿ ವಹಿಸುವುದಕ್ಕೆ ಉದಾಹರಣೆಯಾಗಿದೆ ಎಂದು ತಿಳಿಸಿದ್ದಾರೆ. 

SCROLL FOR NEXT