ದೇಶ

ಗೆಹ್ಲೋಟ್ v/s ಪೈಲಟ್: ಶಾಸಕಾಂಗ ಪಕ್ಷದ ಸಭೆಗೆ ಗೈರಾದ ನಾಯಕರಿಗೆ ರಾಜಸ್ಥಾನ ಸ್ಪೀಕರ್ ನೋಟಿಸ್

Manjula VN

ಜೈಪುರ: ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾದ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗ ಶಾಸಕರನ್ನು ಅನರ್ಹಗೊಳಿಸುವ ಸಂಬಂಧ ಕಾರಣ ಕೇಳಿ ರಾಜಸ್ಥಾನ ವಿಧಾನಸಭೆಯ ಸ್ಪೀಕರ್ ಸಿ.ಪಿ.ಜೋಷಿಯವರು ಬುಧವಾರ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. 

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯ ಎದ್ದಿದ್ದ ಪೈಲಟ್ ಅವರನ್ನು ಈಗಾಗಲೇ ಉಪಮುಖ್ಯಮಂತ್ರಿ ಮತ್ತು ಪಕ್ಷದ ರಾಜ್ಯ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ. ಅಲ್ಲದೆ, ಸಚಿನ್ ಪೈಲಟ್ ಪರವಾಗಿದ್ದ ಇಬ್ಬರು ಸಚಿವರನ್ನೂ ಕೂಡ ಸಂಪುಟದಿಂದ ಕೈಬಿಡಲಾಗಿದೆ. 

ಇದೀಗ ಶಾಸಕಾಂಗ ಪಕ್ಷಧ ಸಭೆಗೆ ಗೈರು ಹಾಜರಾದ ಶಾಸಕರಿಗೆ ಸ್ಪೀಕರ್ ನೋಟಿಸ್ ಜಾರಿ ಮಾಡಿದ್ದು, ಅವರನ್ನು ಅನರ್ಹಗೊಳಿಸುವಂತೆ ಪಕ್ಷವು ಸ್ಪೀಕರ್ ಅವರಿಗೆ ಮನವಿ ಮಾಡಲಿದೆ ಎಂದು ಹೇಳಲಾಗುತ್ತಿದೆ. 

ಸೋಮವಾರ ನಡೆದ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವಂತೆ ಈ ಹಿಂದೆ ಪಕ್ಷವು ಬಂಡಾಯ ಎದಿದ್ದ ಸಚಿನ್ ಪೈಲಟ್ ಸೇರಿದಂತೆ 18 ಮಂದಿ ಶಾಸಕರಿಗೆ ವಿಪ್ ಜಾರಿ ಮಾಡಿತ್ತು. ಆದರೂ ಸಭೆಗೆ ಶಾಸಕರು ಗೈರು ಹಾಜರಾಗಿದ್ದರು. 

ಈ ಹಿನ್ನೆಲೆಯಲ್ಲಿ ಕಾರಣ ಕೇಳಿ ಸ್ಪೀಕರ್ ಶಾಸಕರಿಗೆ ನೋಟಿಸ್ ಜಾರಿ ಮಾಡಿದ್ದು, ಶುಕ್ರವಾರದೊಳಗಾಗಿ ಪ್ರತಿಕ್ರಿಯೆ ನೀಡುವಂತೆ ಗಡುವು ನೀಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. 

SCROLL FOR NEXT