ದೇಶ

ಮುಂಬೈ: ಮಹಾಮಳೆಗೆ 2 ಕಟ್ಟಡ ಕುಸಿತ, ಇಬ್ಬರ ಸಾವು, ಅವಶೇಷಗಳಡಿಯಲ್ಲಿ ಹಲವರು ಸಿಲುಕಿರುವ ಶಂಕೆ

Srinivasamurthy VN

ಮುಂಬೈ: ಮುಂಬೈನಲ್ಲಿ ಸುರಿಯುತ್ತಿರುವ ಮಹಾಮಳೆಗೆ 2 ಬಹುಮಹಡಿ ಕಟ್ಟಡಗಳು ಕುಸಿದಿದ್ದು, ಈ ದುರ್ಘಟನೆಯಲ್ಲಿ ಕನಿಷ್ಛ ಇಬ್ಬರು ಸಾವನ್ನಪ್ಪಿ ಹಲವಾರು ಮಂದಿ ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.

ಭಾರೀ ಮಳೆಯಿಂದ ನಗರ ಮತ್ತು ಅದರ ಉಪನಗರ ಪ್ರದೇಶದಲ್ಲಿ ಗುರುವಾರ ಎರಡು ಕಟ್ಟಡಗಳು ಕುಸಿದು ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, 15 ಮಂದಿಯನ್ನು ರಕ್ಷಿಸಲಾಗಿದೆ ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ ವಿಪತ್ತು ವಿಭಾಗದ ಮೂಲಗಳು ತಿಳಿಸಿವೆ.

ಮೊದಲ ಘಟನೆಯಲ್ಲಿ ಮಲಾಡ್‌ನ (ಪಶ್ಚಿಮ) ಮಾಲ್ವಾನಿ ಎಂಬಲ್ಲಿ 3 ಅಂತಸ್ತಿನ ಕಟ್ಟಡದ ಪ್ಲಾಟ್ ನಂ 8 ಬಿಗೆ ಭಾರಿ ಮಳೆಯ ನೀರು ಹರಿದು ಇಡೀ ಕಟ್ಟಡ ಕುಸಿದು, ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ. ಕಟ್ಟಡದ ಅವಶೇಷಗಳಿಂದ 13 ಜನರನ್ನು ರಕ್ಷಿಸಲಾಗಿದೆ.

ಇನ್ನೂ 4-5 ಜನರು ಅವಶೇಷಗಳಡಿ ಸಿಕ್ಕಿಬಿದ್ದಿರುವ ಶಂಕೆ ಇದ್ದು, ಮುಂಬೈ ಅಗ್ನಿಶಾಮಕ ದಳ ಮತ್ತು ವಿಪತ್ತು ತಂಡಗಳು ಅವರನ್ನು ರಕ್ಷಿಸುವಲ್ಲಿ ನಿರತವಾಗಿವೆ.

ಘಟನಾ ಸ್ಥಳಕ್ಕೆ ಸಿಎಂ ಉದ್ಧವ್ ಠಾಕ್ರೆ ದೌಡು
ಇನ್ನು ಕಟ್ಟಡ ಕುಸಿತ ಪ್ರಕರಣದ ಮಾಹಿತಿ ತಿಳಿಯುತ್ತಲೇ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ರಕ್ಷಣಾ ಕಾರ್ಯಾಚರಣೆಗೆ ಬೇಕಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

SCROLL FOR NEXT