ದೇಶ

ಅಪಹರಣಕ್ಕೊಳಗಾಗಿದ್ದ ಬಿಜೆಪಿ ಮುಖಂಡನನ್ನು ರಕ್ಷಿಸಿದ ಜಮ್ಮು ಕಾಶ್ಮೀರ ಪೊಲೀಸರು

Shilpa D

ಶ್ರೀನಗರ: ಅಪರಿಚಿತ ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾಗಿದ್ದ ಸ್ಥಳೀಯ ಬಿಜೆಪಿ ಮುಖಂಡ ಮತ್ತು ಸೊಪೋರ್‌ ಜಿಲ್ಲೆಯ ವಾಟರ್‌ಗಾಮ್‌ ಪಾಲಿಕೆ ಸಮಿತಿ ಉಪಾಧ್ಯಕ್ಷ ಮೆಹ್ರಾಜುದಿನ್‌ ಮಲ್ಲಾ ಅವರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರ ತಂಡ ರಕ್ಷಿಸಿದೆ. 

ಬುಧವಾರ ಬೆಳಗ್ಗೆ ಮಲ್ಲಾ ಅವರು ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸ್ನೇಹಿತರ ಮನೆಗೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಅವರನ್ನು ಸೊಪೋರ್‌ನಲ್ಲಿ ಅಪಹರಿಸಿದ್ದರು. ಸೇನಾ ಪಡೆಗಳ ನೆರವಿನೊಂದಿಗೆ ಪೊಲೀಸರು ತೀವ್ರ ಶೋಧ ಕಾರ್ಯ ಕೈಗೊಂಡು ಸೊಪೋರ್‌ ಪಟ್ಟಣ ತೊರೆಯುವ ಮತ್ತು ಪ್ರವೇಶಿಸುವ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಿದ್ದರು. ಸಂಜೆ ಹೊತ್ತಿಗೆ ಅವರನ್ನು ರಕ್ಷಿಸಲಾಗಿದೆ. 

ಕಳೆದ ವಾರ ಬಂಡಿಪೊರ ಜಿಲ್ಲೆಯ ಬಿಜೆಪಿ ನಾಯಕ ವಾಸಿಮ್‌ ಬಾರಿ, ಅವರ ಸೋದರ ಮತ್ತು ತಂದೆಯನ್ನು ಉಗ್ರರು ಅಪಹರಿಸಿ ಹತ್ಯೆಗೈದಿದ್ದರು. ಈ ಘಟನೆಯಿಂದ ಕಣಿವೆಯಲ್ಲಿ ಬಿಜೆಪಿ ನಾಯಕರನ್ನು ಉಗ್ರರು ಗುರಿಯಾಗಿಸುತ್ತಿರುವ ಆತಂಕ ಮೂಡಿದೆ. ಹೀಗಾಗಿ ಬಿಜೆಪಿಯ ತಳ ಮಟ್ಟದ ಕಾರ್ಯಕರ್ತರಿಗೂ ರಕ್ಷಣೆ ನೀಡಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಲ್ಲಿ ಮನವಿ ಮಾಡಿರುವುದಾಗಿ ಬಿಜೆಪಿ ಮುಖಂಡ ಮನ್ಸೂರ್ ಅಜ್ಮದ್ ಭಟ್ ತಿಳಿಸಿದ್ದಾರೆ.

SCROLL FOR NEXT